Pak Movie in India: ದಶಕಗಳ ಬಳಿಕ ಭಾರತದಲ್ಲಿ ರಿಲೀಸ್ ಆಗ್ತಿದೆ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾ; ಹೊಸ ಸಾಹಸಕ್ಕೆ ಮುಂದಾದ ಐನಾಕ್ಸ್..!

ಮುಂಬೈ: Pak Movie in India: ಶತ್ರುರಾಷ್ಟ್ರ ಪಾಕಿಸ್ತಾನದ ಪರ ವಹಿಸಿ ಮಾತನಾಡುವ ಭಾರತೀಯರು ರಾಷ್ಟ್ರದ್ರೋಹಿಗಳು ಎನಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಭಾರತಕ್ಕೂ- ಪಾಕಿಸ್ತಾನಕ್ಕೂ ದಶಕಗಳ ವೈರತ್ವವಿದೆ. ಹಾಗಂತ ಕಲೆಗೆ ಮಾತ್ರ ಯಾವುದೇ ಶತ್ರುತ್ವದ ಪರಿಧಿಯಿಲ್ಲ. ಪಾಕಿಸ್ತಾನದ ಅದೆಷ್ಟೋ ಗಾಯಕರಿಗೆ ಭಾರತ ದೇಶವು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇದೀಗ ದಶಕಗಳ ಬಳಿಕ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾವೊಂದು ಭಾರತದಲ್ಲಿ ರಿಲೀಸ್ ಆಗುತ್ತಿರುವುದಾಗಿ ವರದಿಯಾಗಿದೆ.

2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ಹಿಂದೆ ಉಗ್ರರ ಕೈವಾಡ ಇದೆ ಎಂಬ ಸಾಕ್ಷಿಗಳು ಸಿಕ್ಕ ಬೆನ್ನಲ್ಲೇ ಭಾರತದಲ್ಲಿ ಪಾಕಿಸ್ತಾನದ ಸಿನಿಮಾಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಅಲ್ಲದೇ ಪಾಕಿಸ್ತಾನದ ಕಲಾವಿದರು ಹಾಗೂ ಗಾಯಕರಿಗೆ ಗೇಟ್ ಪಾಸ್ ನೀಡಲಾಗಿತ್ತು. ಇದೀಗ ದಶಕಗಳ ಬಳಿಕ ಭಾರತದಲ್ಲಿ ಪಾಕ್ ಸಿನಿಮಾವೊಂದನ್ನು ರಿಲೀಸ್ ಮಾಡುವ ಸಾಹಸಕ್ಕೆ ಐನಾಕ್ಸ್ ಮುಂದಾಗಿದೆ. ಪಾಕಿಸ್ತಾನದಲ್ಲಿ ಸೂಪರ್ ಹಿಟ್ ಆದ ದಿ ಲೆಜೆಂಡ್ಸ್ ಆಫ್ ಮೌಲಾ ಜತ್ ಸಿನಿಮಾವನ್ನು ರಿಲೀಸ್ ಮಾಡಲು ಐನಾಕ್ಸ್ ಮುಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Indian movie industry : 2022 ವರ್ಷದ ಕೊನೆಯ ಶುಕ್ರವಾರ ರಿಲೀಸ್‌ ಆಗುವ ವಿವಿಧ ಇಂಡಸ್ಟ್ರಿಯ ಸಿನಿಮಾ ಯಾವುವು ಗೊತ್ತಾ ?

ಬಿಲಾಲ್ ಲಷರಿ ನಿರ್ದೇಶನದ ದಿ ಲೆಜೆಂಡ್ಸ್ ಆಫ್ ಮೌಲಾ ಜತ್ ಸಿನಿಮಾದಲ್ಲಿ ಫವಾದ್ ಖಾನ್ ಹಾಗೂ ಮಹಿರಾ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ವರ್ಷ ಅಕ್ಟೋಬರ್ 13ರಂದು ಪಾಕಿಸ್ತಾನದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. 50 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಸಿನಿಮಾವು ಬಾಕ್ಸಾಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಪಾಕಿಸ್ತಾನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಇದೀಗ 2 ತಿಂಗಳ ಬಳಿಕ ಭಾರತದಲ್ಲಿ ಈ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಐನಾಕ್ಸ್ ಬಂದಿದೆ ಎನ್ನಲಾಗುತ್ತಿದೆ.

ಅಂದಹಾಗೆ ಈ ಸಿನಿಮಾ ರಿಲೀಸ್ ಆದರೂ ಭಾರತದೆಲ್ಲೆಡೆ ತೆರೆ ಕಾಣುವುದಿಲ್ಲ. ಈ ಸಿನಿಮಾ ಪಂಜಾಬ್ ಹಾಗೂ ದೆಹಲಿ ಭಾಗದಲ್ಲಿ ರಿಲೀಸ್ ಆಗಲಿದೆ. ಪಂಜಾಬಿ ಭಾಷಿಗರಿಗಾಗಿಯೇ ಈ ಸಿನಿಮಾ ತೆರೆ ಕಾಣಲಿದೆ ಎಂದು ಐನಾಕ್ಸ್ ತಿಳಿಸಿದೆ. ಈ ಬಗ್ಗೆ ಚೆನ್ನೈನ ಮಲ್ಟಿಪ್ಲೆಕ್ಸ್ ಪಿವಿಆರ್ ಮಾಹಿತಿ ನೀಡಿದ್ದು, ಬಳಿಕ ಪೋಸ್ಟ್ ಡಿಲೀಟ್ ಮಾಡಿದೆ. ವಿರೋಧ ವ್ಯಕ್ತವಾದ ಹಿನ್ನೆಲೆ ಪೋಸ್ಟ್ ಅಳಿಸಲಾಗಿದೆ ಎನ್ನಲಾಗಿದೆ.

2011ರಲ್ಲಿ ಪಾಕಿಸ್ತಾನದ ಬೋಲ್ ಸಿನಿಮಾವು ಭಾರತದಲ್ಲಿ ರಿಲೀಸ್ ಆಗಿತ್ತು. ಅದಾದ ಬಳಿಕ ಅಲ್ಲಿನ ಯಾವುದೇ ಸಿನಿಮಾಗಳೂ ನಮ್ಮ ದೇಶದಲ್ಲಿ ತೆರೆ ಕಂಡಿರಲಿಲ್ಲ. ಇದೀಗ 11 ವರ್ಷಗಳ ಬಳಿಕ ಐನಾಕ್ಸ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಆದರೆ ಇದಕ್ಕೆ ಈಗಾಗಲೇ ವಿರೋಧಗಳು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಮಾನಗಳಿಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: Tininga Mininga Tishya Song : ‘ಸಲಗ’ ಸಿನಿಮಾದ ಗಾಯಕಿ ಗೀತಾ ಸಿದ್ಧಿಗೆ ಒಲಿದ ಡಾಕ್ಟರೇಟ್ ಪ್ರಶಸ್ತಿ

Pak Movie in India: Pakistan’s super hit movie is releasing in India after decades Inox is ready for a new adventure

Comments are closed.