Puspha: ಜೋಕೆ ಜೋಕೆ ಮೇಕೆ….! ಹಸಿವಿನ ಕತೆ ಹೇಳುತ್ತಲೇ ಮನಗೆದ್ದ ಪುಷ್ಪ ಸಾಂಗ್….!

ತೆಲುಗಿನಲ್ಲಿ ಮಿಂಚಿದ ಕೊಡಗಿನ ಕುವರಿ  ರಶ್ಮಿಕಾ ಮಂದಣ್ಣ ಬಹುನೀರಿಕ್ಷಿತ ಸಿನಿಮಾ ಪುಷ್ಪಾದ ಹಾಡು ಕನ್ನಡದಲ್ಲಿ ರಿಲೀಸ್ ಆಗಿದ್ದು, ಹಸಿವಿನ ಕರಾಳತೆ ಬಿಚ್ಚಿಡುವ ಅಪ್ಪಟ ಹಳ್ಳಿ ಸೊಗಡಿನ ಹಾಡು ಪ್ರೇಕ್ಷಕರ ಮನಗೆದ್ದಿದೆ.

ಬಹುಭಾಷೆಯಲ್ಲಿ ಒಟ್ಟಿಗೆ ತೆರೆಗೆ ಬರಲಿರುವ ಪುಷ್ಪಾ ಸಿನಿಮಾ ರಕ್ತಚಂದನ ಕಳ್ಳಸಾಗಾಣಿಕೆಯ ಕತೆಯನ್ನು ತೆರೆಗೆ ತರುವ ಪ್ರಯತ್ನವಾಗಿದೆ. ಅಲ್ಲೂ ಅರ್ಜುನ್ ನಾಯಕರಾಗಿರುವ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

ದಾಕ್ಕೊ ದಾಕ್ಕೊ ಮೇಕ ಎಂದಿರುವ ತೆಲುಗು ಹಾಡು ಕನ್ನಡದಲ್ಲಿ ಜೋಕೆ ಜೋಕೆ ಮೇಕೆ ಎಂದಾಗಿದ್ದು, ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಲಯಬದ್ಧವಾದ ಸಂಗೀತ ಹಾಗೂ ತೀಕ್ಷ್ಣವಾದ ಸಾಹಿತ್ಯದಿಂದ ಹಾಡು ಮನಗೆಲ್ಲುವಂತಿದ್ದು, ಜೋಕೆ ಜೋಕೆ ಮೇಕೆ ಹೆಬ್ಬುಲಿ ಹಾಕಿದೆ ಕೇಕೆ ಎಂಬ ಸಾಲುಗಳು ಗಮನ ಸೆಳೆಯುತ್ತಿವೆ.

ಬೆಳಕನ್ನು ಎಲೆ ತಿನ್ನುತ್ತೇ, ಎಲೆಯನ್ನು ಆಡು ತಿನ್ನುತ್ತೇ, ಆಡನ್ನು ಹುಲಿ ತಿನ್ನುತ್ತೇ, ಹುಲಿಯನ್ನು ಸಾವು ತಿನ್ನುತ್ತೆ, ಸಾವನ್ನು ಕಾಲ ತಿನ್ನುತ್ತೇ, ಕಾಲವನ್ನು ಕಾಳಿ ತಿನ್ನುತ್ತಾಳೆ. ಇದು ಹಸಿವಿನ ಜಾಲ ಎನ್ನುವ ಸಾಹಿತ್ಯ ಸಾಲುಗಳು ಹಸಿವಿನ ಚಕ್ರದ ಬಗ್ಗೆ ಹೇಳುತ್ತಲೇ ಯಾರಿಗೂ ಯಾರೂ ದೊಡ್ಡವರಲ್ಲ ಎಂಬ ಸಂಗತಿ ಸಾರುತ್ತಿವೆ.

ಸುಕುಮಾರ್ ನಿರ್ದೇಶಿಸಿರುವ  ಈ ಸಿನಿಮಾ ಎರಡು ಭಾಗದಲ್ಲಿ ತೆರೆಗೆ ಬರಲಿದ್ದು, ವರದರಾಜ್ ಚಿಕ್ಕಬಳ್ಳಾಪುರ ಹಾಡಿಗೆ ಕನ್ನಡ ರೂಪ ನೀಡಿದ್ದಾರಂತೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರಲಿದೆ.

Comments are closed.