Ramya as Producer : ಸಿಹಿಸುದ್ದಿ, ನಿರ್ಮಾಪಕಿಯಾಗಿ ರಮ್ಯಾ ರೀ ಎಂಟ್ರಿ

ಬೆಂಗಳೂರು : Ramya as Producer ಕಳೆದ 24 ಗಂಟೆಗಳಿಂದ ತಮ್ಮ ಅಭಿಮಾನಿಗಳ ತಲೆಗೆ ‘ಸಿಹಿ ಸುದ್ದಿ’ ಹುಳ ಬಿಟಿದ್ದ  ಸ್ಯಾಂಡಲ್ ವುಡ್ ನಟಿ ರಮ್ಯಾ ಕೊನೆಗೂ ಸಿಹಿ ಸುದ್ದಿ ಏನೆಂದು ಹಂಚಿಕೊಂಡಿದ್ದಾರೆ. ದಶಕಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿದ್ದ ರಮ್ಯಾ ಈಗ ನಿರ್ಮಾಪಕಿಯಾಗಿದ್ದಾರೆ. ಇದೇ ನಾನು ನೀಡ್ತಿರೋ ಸಿಹಿ ಸುದ್ದಿ ಎಂದಿದ್ದಾರೆ.

ಗಣೇಶ ಚತುರ್ಥಿ ದಿನವೇ ‘ಆಪಲ್ ಬಾಕ್ಸ್ ಸ್ಟುಡಿಯೋ (Apple Box Studios) ಅನ್ನೋ ಹೊಸ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಯಾವಾಗ ರೀ ಎಂಟ್ರಿ ಕೊಡ್ತಾರೆ. ಮತ್ತೆ ಯಾವಾಗ ಬಣ್ಣ ಹಚ್ತಾರೆ ಅಂತಾ ಅವರ ಅಪಾರ ಅಭಿಮಾನಿಗಳು ಕಾಯುತ್ತಿದ್ದರು. ಈಗ ರಮ್ಯಾ ನಾನು ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡ್ತಿದ್ದೀನಿ ಎಂದಿದ್ದಾರೆ.

ತಾವೇಕೆ ನಿರ್ಮಾಪಕಿಯಾದೇ ಅನ್ನೋದನ್ನ ತಿಳಿಸೋದಕ್ಕಾಗಿಯೇ ರಮ್ಯಾ ಪತ್ರವೊಂದನ್ನ ಬರೆದಿದ್ದಾರೆ.  ‘ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್‌ನ ಮೂಲಕ ನಿರ್ಮಾಪಕಿ ಆಗಲಿದ್ದೇನೆ ಎನ್ನುವುದು ವಿಶೇಷ’ ಎಂದು ಅವರು ಪತ್ರ ಬರೆದಿದ್ದಾರೆ.

‘ಏನಿದು ಆಪಲ್ ಬಾಕ್ಸ್‌? ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ, ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮೆರಾದ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ. ಪ್ರಸ್ತುತ, ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ.ಆರ್.ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲೇ ಒ.ಟಿ.ಟಿ ಪ್ಲಾಟ್ ಫಾರಂಗಳಿಗಾಗಿ ಸಿನಿಮಾ ಹಾಗು ವೆಬ್ ಸೀರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟುಡಿಯೋಸ್ ಸಿದ್ಧವಾಗುತ್ತಿದೆ’ ಎಂದು ರಮ್ಯಾ ತಿಳಿಸಿದ್ದಾರೆ.

‘ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ. ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಸಿನಿಮಾವರ್ಗದವರು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃತ್ಪೂರ್ವಕ ವಂದನೆಗಳು. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆ ಕಟ್ಟಲಾಗದ್ದು. ಇದರ ಜೊತೆಗೆ ವಿಜಯ್​ ಕಿರಗಂದೂರು, ಜಯಣ್ಣ, ಯೋಗಿ ಜಿ. ರಾಜ್ ಮತ್ತು ಕಾರ್ತಿಕ್ ಗೌಡ ಇವರಿಗೂ ವಿಶೇಷ ಧನ್ಯವಾದಗಳು’ ಎಂದು ರಮ್ಯಾ ಅವರು ಪತ್ರದಲ್ಲಿ ಬರೆದಿದ್ದಾರೆ.

Ramya as Producer- Apple Box Studios-Divya spandana-sandalwood-good news

Comments are closed.