ಕೆಜಿಎಫ್ ಚಾಪ್ಟರ್ -2 ಸಿನಿಮಾದ ಟೀಸರ್ ಲೀಕ್ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು..?

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಕೆಜಿಎಫ್ ಚಾಪ್ಟರ್ -2 ಸಿನಿಮಾದ ಟೀಸರ್ ಅದ್ಯಾವಾಗ ನೋಡಬಹುದೋ ಎಂದು ಕಾದುಕುಳಿತ ಅಭಿಮಾನಿಗಳಿಗೆ ಸದ್ಯ ಸಂಭ್ರಮಿಸಬೇಕೋ ದುಃಖಿಸಬೇಕೋ ತಿಳಿಯದಾಗಿದೆ. ಯಾಕಂದ್ರೆ ನಾಳೆ ಬೆಳಗ್ಗೆ ರಿಲೀಸ್ ಆಗಬೇಕಿದ್ದ ಚಿತ್ರದ ಟೀಸರನ್ನು ಇಂದೇ ಯಾರೋ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ.

ಹೌದು, ಕೆಜಿಎಫ್ ಚಾಪ್ಟರ್ -2 ಸಿನಿಮಾದ ಟೀಸರ್ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನದಂದೇ ಹೊರತರುವುದಾಗಿ ಹೊಂಬಾಳೆ ಪ್ರೊಡಕ್ಷನ್ ಹೌಸ್ ಹೇಳಿತ್ತು. ಆದ್ರೆ ಇದೀಗ ಟ್ವೀಟ್ ಮೂಲಕ ಬದಲಾದ ಸಮಯವನ್ನ ತಿಳಿಸಿರುವ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಇಂದು ರಾತ್ರಿ 09:29ಕ್ಕೇ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಟೀಸರ್ ಲೀಕ್ ಮಾಡುವ ಕಿಡಿಗೇಡಿ ಮನಸ್ಸುಗಳಿಗೆ ಕೆಜಿಎಫ್ ತಂಡ ಖಡಕ್ ಉತ್ತರವನ್ನ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ನಟ ಯಶ್, ಟ್ವಿಟರ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರೋ ಪುಣ್ಯಾತ್ಮರು, ಮಹಾನುಭಾವರು, ಈ ಟೀಸರನ್ನ ಈಗಾಗಲೇ ಲೀಕ್ ಮಾಡಿದ್ದಾರೆ. ಅವರಿಗೆ ಏನು ಸಂತೋಷ ಸಿಗುತ್ತೋ ಗೊತ್ತಿಲ್ಲ, ಆದರೂ ದೇವರು ಅವರಿಗೆ ಒಳ್ಳೆಯದು ಮಾಡಲಿ.

ಮುಖ್ಯವಾಗಿ ಅಭಿಮಾನಿಗಳಿಗೆ ಫ್ಯಾನ್ಸ್ಗೆ ಒಂದು ಮಾತನ್ನ ಹೇಳಲು ಇಷ್ಟಪಡುತ್ತೇನೆ. ಅಭಿಮಾನಿಗಳು ತುಂಬಾ ಆಸೆಗಳನ್ನ ಇಟ್ಟುಕೊಂಡಿದ್ದೀರಿ. ನಿಮಗಾಗಿ ಈಗಾಗಲೇ ಟೀಸರ್ ರಿಲೀಸ್ ಮಾಡುತ್ತಿದ್ದೇವೆ ಎಂಬುದಾಗಿ ತಿಳಿಸಿ ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

ಇನ್ನು ಟೀಸರ್ ತೆರೆ ಕಾಣುತ್ತಲೇ ಅಭಿಮಾನಿಗಳ ಮೆಚ್ಚಿಗೆ ಗಳಿಸಿದೆ. ಟೀಸರ್ನಲ್ಲಿ ಯಶ್ ಲುಕ್ ಭಯ ಹುಟ್ಟಿಸುವಂತಿದೆ.. ಆಧುನಿಕ ಸ್ಟೆನ್ ಗನ್ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಲಿದೆ.

ರಾತ್ರಿ ವೇಳೆ ಟೀಸರ್ ರಿಲೀಸ್ ಆದರೂ ದಾಖಲೆ ಮಟ್ಟದಲ್ಲಿ ವೀಕ್ಷಣೆ ಕಾಣುತ್ತಿದೆ. ಟೀಸರ್ ಬಿಡುಗಡೆಯಾದ 49 ನಿಮಿಷಗಳಲ್ಲೇ ಯೂಟ್ಯೂಬ್ನಲ್ಲಿ ಕೆಜಿಎಫ್-2 ಟೀಸರ್ 5 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ದಾಖಲೆ ಬರೆಯುವತ್ತ ಕೆಜಿಎಫ್-2 ಟೀಸರ್ ಸಾಗುತ್ತಿದೆ.

Comments are closed.