S.K Bhagavan: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ಚಂದನವನದ ಹಿರಿಯ ಸಿನಿಮಾ ನಿರ್ದೇಶಕ ಭಗವಾನ್ (S.K Bhagavan) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಎಂಬುವುದು ಇವರ ಮೂಲನಾಮ. ಆದರೆ ಸ್ಯಾಂಡಲ್ ವುಡ್ ನಲ್ಲಿ ಭಗವಾನ್ ಎಂದೇ ಪ್ರಸಿದ್ಧಿಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಕನ್ನಡ ಸಿನಿರಂಗದಲ್ಲಿ ಖ್ಯಾತ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅಷ್ಟೇ ಅಲ್ಲದೇ ನಟರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಇವರಿಗೆ 89 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವಿಪರೀತ ಶೀತದಿಂದ ಬಳಲುತ್ತಿದ್ದ ಅವರಿಗೆ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಕಳೆದ 2 ದಿನಗಳ ಹಿಂದೆಯೇ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆ ಐಸಿಯುನಲ್ಲಿ ದಾಖಲಿಸಿ ಡಾ. ಮಂಜುನಾಥ್ ಅವರ ನೇತೃತ್ವದಲ್ಲಿ ಭಗವಾನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mandeep Roy: ಕನ್ನಡದ ಹಿರಿಯ ನಟ ಮನ್ ದೀಪ್ ರಾಯ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಚಿಕ್ಕ ವಯಸ್ಸಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಭಗವಾನ್ ಅವರು ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ಬಳಿಕ 1956ರಲ್ಲಿ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರಿಗೆ ಸಹಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. 1966ರಲ್ಲಿ ತೆರೆ ಕಂಡ ಸಂಧ್ಯಾರಾಗ ಚಿತ್ರ ಭಗವಾನ್ ಅವರು ಸಹಾಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮೊದಲ ಸಿನಿಮಾವಾಗಿದೆ. ಆ ಬಳಿಕ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರರಾಗಿ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದರು.

ಭಗವಾನ್ ಹಾಗೂ ದೊರೈರಾಜ್ ಜಂಟಿಯಾಗಿ 55 ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಸ್ತೂರಿ ನಿವಾಸ, ಬಯಲುದಾರಿ, ಎರಡು ಕನಸು, ಗಿರಿ ಕನ್ಯೆ, ಚಂದನದ ಗೊಂಬೆ, ವಸಂತಗೀತ, ಆಪರೇಷನ್ ಡೈಮಂಡ್, ರಾಕೆಟ್, ಹೊಸಬೆಳಕು, ಯಾರಿವನು ಸೇರಿದಂತೆ ಹತ್ತು ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಕೀರ್ತಿ ಭಗವಾನ್ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: Rishab Shetty visits Anegudde: ಆನೆಗುಡ್ಡೆಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ: ವಿನಾಯಕನ ಸನ್ನಿಧಾನದಲ್ಲಿ ವಿಶೇಷ ಪೂಜೆ

ಭಗವಾನ್ ಅವರ 30 ಸಿನಿಮಾಗಳಲ್ಲಿ ವರನಟ ಡಾ.ರಾಜ್ ಕುಮಾರ್ ಅವರು ನಾಯಕ ನಟನಾಗಿ ಅಭಿನಯಿಸಿರುವುದು ಇವರ ಮತ್ತೊಂದು ಗರಿಮೆ. ಇತ್ತೀಚೆಗೆ ತೆರೆ ಕಂಡ ವಿನಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲೂ ಭಗವಾನ್ ಅವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 65 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ಇವರು ದೊರೈರಾಜರ ನಿಧನದ ಬಳಿಕ ನಿರ್ದೇಶನದಿಂದ ನಿವೃತ್ತಿ ಪಡೆದಿದ್ದರು.

S.K Bhagavan: Kannada Film Industry Senior Director Bhagavan’s Health Condition is Critical

Comments are closed.