ತಿಂಗಳ ಪುಣ್ಯತಿಥಿಯಂದೇ ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ: ನಗರದ ರಸ್ತೆಗೆ ಅಪ್ಪು ಹೆಸರು

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಇಂದಿಗೆ ಒಂದು ತಿಂಗಳು ತುಂಬಿದೆ. ಇನ್ನೂ ಅಭಿಮಾನಿಗಳ, ಕುಟುಂಬಸ್ಥರ ಕಣ್ಣೀರು ನಿಂತಿಲ್ಲ. ಈ ಮಧ್ಯೆ ಪುನೀತ್ ಒಂದು ತಿಂಗಳ ಕಾರ್ಯದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಈಗಾಗಲೇ ಬಿಬಿಎಂಪಿ ಆವರಣದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಜೈ ಎಂದಿದ್ದ ಬಿಬಿಎಂಪಿ ಈಗ ನಗರದ ರಸ್ತೆಯೊಂದಕ್ಕೆ ಪುನೀತ್ ಹೆಸರು ನಾಮಕರಣ ಮಾಡಲು ಸಿದ್ಧವಾಗಿದೆ.

ನಗರದ ಉದ್ದದ ರಸ್ತೆಯೊಂದಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ ಇರುವ ಡಾ.ರಾಜ್ ಕುಮಾರ್ ರಸ್ತೆಯ ಮುಂದುವರಿದ ಉದ್ದನೆಯ ರಸ್ತೆಗೆ ಬಿಬಿಎಂಪಿ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಸಿದ್ಧತೆ‌ ನಡೆದಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ನಾಯಂಡನಹಳ್ಳಿ ಜಂಕ್ಷನ್ ನಿಂದ ಮೇಗಾಸಿಟಿ ಮಾಲ್ ಜಂಕ್ಷನ್ ರಸ್ತೆಗೆ ಪುನೀತ್ ಹೆಸರು ಇಡಲಾಗುತ್ತದೆ. ಮೈಸೂರು ರಸ್ತೆಯ ನಾಯಂಡನಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯೆ ಮೇಗಾಸಿಟಿ ಮಾಲ್ ತನಕ ರಸ್ತೆಗೆ ಪುನೀತ್ ಹೆಸರು ಇಡಲು ಪಾಲಿಕೆ ನಿರ್ಧರಿಸಿದೆ.

ಕಂಠೀರವ ಸ್ಟುಡಿಯೋ ದಿಂದ ನಾಯಂಡನಹಳ್ಳಿ ಜಂಕ್ಷನ್ ವರೆಗೆ ಇರುವ ರಸ್ತೆಗೆ ಡಾ. ರಾಜ್ ಕುಮಾರ್ ಹೆಸರು ಇಡಲಾಗಿದೆ. ಮುಂದಿನ 12 ಕಿಲೋಮೀಟರ್ ರಸ್ತೆಗೆ ಪುನೀತ್ ಹೆಸರು ಇಡಲಾಗುತ್ತದೆ. ವಿವಿಧ ಸಂಘ ಸಂಸ್ಥೆಗಳು ಹಾಗೂ ಪುನೀತ್ ಅಭಿಮಾನಿಗಳ ಪ್ರಸ್ತಾವಕ್ಕೆ ಬಿಬಿಎಂಪಿ ಹಾಗೂ ಸರ್ಕಾರ ಅನುಮತಿ ನೀಡಿದೆ. ಕೆಲ ದಿನಗಳಲ್ಲೇ ಬಿಬಿಎಂಪಿ ಆವರಣ ದಲ್ಲಿರೋ ಡಾ.ರಾಜ್ ಪುತ್ಥಳಿ ಪಕ್ಕದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಕೂಡ ನಿರ್ಮಾಣವಾಗಲಿದ್ದು ಬಿಬಿಎಂಪಿ ನೌಕರರ ಸಂಘದ ಈ ಬೇಡಿಕೆಗೂ ಬಿಬಿಎಂಪಿ ಒಪ್ಪಿಗೆ ಸೂಚಿಸಿತ್ತು.

ಆದರೆ ಪುನೀತ್ ಸ್ಮರಣೆಗಾಗಿ ಪುತ್ಥಳಿ ನಿರ್ಮಿಸುವ ಅಭಿಮಾನಿಗಳಿಗೆ ಬಿಬಿಎಂಪಿ ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಜನ ಓಡಾಡುವ ಅಥವಾ ಫುಟ್ ಪಾತ್ ಗಳ ಮೇಲೆ ಪುನೀತ್ ಪುತ್ಥಳಿ ಸ್ಥಾಪಿಸದಂತೆಯೂ ಸೂಚನೆ ನೀಡಿದೆ. ಇನ್ನು ನಗರದ ರಸ್ತೆಗೆ ಪುನೀತ್ ಹೆಸರು ನೀಡುವ ಬಿಬಿಎಂಪಿ ನಿರ್ಣಯಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಪುನೀತ್ ಸಾಮಾಜಿಕ ಕಾರ್ಯಗಳಿಗೆ ಸಂದ ಗೌರವ ಎಂದು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ : ಪರಮಾತ್ಮನ ಸೇರಿದ ಪುನೀತ್ : ಮಾಸದ ನೋವಿನೊಂದಿಗೆ ಅಪ್ಪು ಸ್ಮರಿಸಿದ ಕುಟುಂಬ

ಇದನ್ನೂ ಓದಿ : ಮೂರು ಗಂಟಿನೊಂದಿಗೆ ಒಂದಾದ್ರು ಮೂರಡಿ ಜೋಡಿ: ಸ್ಪೆಶಲ್ ಮದುವೆ ನೀವು ನೋಡಿ

( good news for Puneeth Raj Kumar Fans, Appu’s name for the city road )

Comments are closed.