ಪುಕ್ಸಟ್ಟೆ ಲೈಫು ಸಿನಿಮಾ ನೋಡಿ ನೀನೊಬ್ಬ ಇರಬೇಕಿತ್ತು ಎಂದ ಸ್ಯಾಂಡಲ್ ವುಡ್ ನಿರ್ದೇಶಕರು

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್  ಅಭಿನಯದ ಕೊನೆ ಚಿತ್ರ ಪುಕ್ಸಟ್ಟೆ ಲೈಫು ತೆರೆ ಕಂಡಿದೆ. ಟ್ರೇಲರ್ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ ಸಿನಿಮಾಗೂ ಒಳ್ಳೆ ರಿವ್ಯೂ ಬರುತ್ತಿದೆ. ಈ ಮಧ್ಯೆ ಸಿನಿಮಾ ನೋಡಿದ ಕನ್ನಡದ ನಿರ್ದೇಶಕ ಬಿ.ಎಸ್.ಲಿಂಗದೇವರು ವಿಜಯ್ ಗೊಂದು ಸುದೀರ್ಘ ಪತ್ರ ಬರೆದಿದ್ದಾರೆ.

ನೀನೊಬ್ಬಇರಬೇಕಿತ್ತು ವಿಜಯ್

ಪೋಲೀಸ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಹೇಳುತ್ತಾ ಪೋಲೀಸರ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಚಿತ್ರ ಪುಕ್ಸಟ್ಟೆ ಲೈಫ್ ಎಂಬ ಅಪ್ಪಟ ಕನ್ನಡದ ಸ್ವಮೇಕ್ ಸಿನಿಮಾ ಇವತ್ತಿನ ಸಂದರ್ಭಕ್ಕೆ ಜರೂರಾಗಿ ಬೇಕಾಗಿತ್ತು.

ಪುಕ್ಸಟ್ಟೆ ಲೈಫ್ ಪೋಲೀಸ್ ವ್ಯವಸ್ಥೆಗೆ ಸಲ್ಲಿಸಿದ ಮನ್ನಣೆ / ಅರ್ಪಣೆ ಎಂದು ನಾನು ಭಾವಿಸುತ್ತೇನೆ.

ಇಂದು ಸಿನಿಮಾಗಳನ್ನು ನೋಡಲು OTT ಯೇ ಸಾಕು ಎನ್ನುವ ಭಾವ ಹಲವರಲ್ಲಿ ಮತ್ತು ಕಳೆದ ಒಂದೂವರೆ ವರ್ಷಗಳಿಂದ ಕನ್ನಡಿಗರಾದ ನಾವು ಪರಭಾಷೆ ಸಿನಿಮಾಗಳನ್ನು OTT ಯಲ್ಲಿ ತುಸು ಹೆಚ್ಚೇ ನೋಡಿದ್ದೇವೆ ಮತ್ತು ಮೆಚ್ಚಿದ್ದೇವೆ, ಜೊತೆಗೆ ನಮ್ಮ ಅಕ್ಕ ಪಕ್ಕದವರಿಗೆಲ್ಲಾ ಹೇಳಿ ಆ ಸಿನಿಮಾಗಳನ್ನು ನೋಡಲು ಪ್ರೇರಣೆ ಮಾಡಿದ್ದೇವೆ!! ಕೆಲವು ಸಿನಿಮಾಗಳು ಅರ್ಹತೆ ಇಲ್ಲದಿದ್ದರೂ ಕೂಡ ನೋಡಿದ್ದೇವೆ. ಈ ಕರೋನ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳು OTT ಯಲ್ಲಿ ಬಂದಿದ್ದು ಕಡಿಮೆ ! ಜನರನ್ನು ತಲುಪಲು ಸಾಧ್ಯವಾಗಲಿಲ್ಲ ಎಂಬ ಕೊರಗು ಅನೇಕರಲ್ಲಿದೆ ಮತ್ತು ಬಂದ ಕೆಲ ಸಿನಿಮಾಗಳು ಆಯಾ ಪ್ರೊಡಕ್ಷನ್ ಹೌಸ್ ಪ್ರಭಾವದಿಂದಾಗಿ OTT ಗಳಲ್ಲಿ ಪ್ರಸಾರವಾಗಿದ್ದರೂ ಪ್ರೇಕ್ಷಕ ಅವುಗಳನ್ನು ಸ್ವೀಕರಿಸಲಿಲ್ಲ ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಒಂದು ತರಹ ಶೂನ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಇವತ್ತು ಪುಕ್ಸಟ್ಟೆ ಲೈಫ್ ಸಿನಿಮಾ ಸರಿಯಾದ ಉತ್ತರ ನೀಡಿದೆ.

ಸಿನಿಮಾ ಇಷ್ಟವಾಗಲು ಕಾರಣ

1 . ಹೊಸತನ ಮತ್ತು ನಾಟಕೀಯವಾದ ವೈಭವೀಕರಣವಿಲ್ಲದ್ದು
2. ಸಿನಿಮಾ ಕಟ್ಟಿದ ರೀತಿ
3. ಪ್ರತಿಯೊಬ್ಬ ಕಲಾವಿದರ ಆಯ್ಕೆ ಮತ್ತು ಎಲ್ಲಾ ಕಲಾವಿದರು ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿರುವುದು.
4. ದೃಶ್ಯ ಸಂಯೋಜನೆ ಅದ್ಬುತವಾಗಿದೆ. ಉದಾಹರಣೆಗೆ ಸ್ವಾಮಿ ಶರಣಂ ಅಯ್ಯಪ್ಪ ಹಾಡಿನ ಸಂಯೋಜನೆ.

ಒಟ್ಟಾರೆ ಹೇಳುವುದಾದರೆ , ಎಲ್ಲರೂ ಹುಟ್ಟುವಾಗ ವಿಶ್ವ ಮಾನವರೆ ಆದರೆ ಸಂದರ್ಭಗಳು ಮನುಷ್ಯರನ್ನು ಅಲ್ಪಮಾನವನ್ನಾಗಿ ಮಾಡುತ್ತವೆ ಎಂಬುದನ್ನು ತುಂಬಾ ಸರಳವಾಗಿ ದೃಶ್ಯ ಮಾಧ್ಯಮಕ್ಕೆ ಅಳವಡಿಸಿರುವ ನಿರ್ದೇಶಕ ಅರವಿಂದ್ ಕುಪ್ಲೀಕರ್ ಅಭಿನಂದನಾರ್ಹರು. ಇನ್ನೂ ವಿಜಯ್ ಬಗ್ಗೆ ಹೇಳುವುದಾದರೆ ನಾನು ಅವಳಲ್ಲ ಅವಳು ನಂತರ ನಾ ಮೆಚ್ಚಿದ್ದು ಈ ಸಿನಿಮಾದ ಶಹಜಾನ್ ಪಾತ್ರ. ಮೇಕಪ್ ಮತ್ತು ಕಾಸ್ಟೂಮ್ ಹಾಕಿ ಕ್ಯಾಮರ ಆನ್ ಅಂದಾಕ್ಷಣ ಆ ಪಾತ್ರವೇ ಆಗುವ ಕೆಲವೇ ಕೆಲವು ಕಲಾವಿದರಲ್ಲಿ ಒಬ್ಬರು ವಿಜಯ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ನೀನೊಬ್ಬಇರಬೇಕಿತ್ತು

ಅಚ್ಯುತ ಮತ್ತು ರಂಗಾಯಣ ರಘು ವಿಶೇಷವಾಗಿ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ ಮತ್ತು ಬೇರೆ ಕಲಾವಿದರು ಕೂಡ ಅಷ್ಟೇ ಆಳವಾಗಿ ನನ್ನಲ್ಲಿ ಬೇರೂರಿದ್ದಾರೆ. ಉದಾಹರಣೆಗೆ ಪೋಲೀಸ್ ಸ್ಟೇಷನ್ ನ ಮಾಲೀಕ !! ಇಡೀ ತಂಡಕ್ಕೆ ಅಭಿನಂದನೆಗಳು. ಬಿ ಎಸ್ ಲಿಂಗದೇವರು

ಬಿ.ಎಸ್.ಲಿಂಗದೇವರು ನಟ ದಿ.ಸಂಚಾರಿ ವಿಜಯ್ ನೆನಪಿಸಿಕೊಂಡು ಬರೆದಿರುವ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಪತ್ರ ಓದಿ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ಪುಕ್ಸಟ್ಟೆ ಲೈಫು ಸಿನಿಮಾ ಪ್ರಮೋಶನ್ ಗೆ ಬಂದ ಸಂಚಾರಿ ವಿಜಯ್ : ಸಾಥ್ ಕೊಟ್ರು ಸ್ಯಾಂಡಲ್ ವುಡ್ ಸ್ಟಾರ್ಸ್

ಇದನ್ನೂ ಓದಿ : ಪುಕ್ಸಟ್ಟೆ ಲೈಫು ಪ್ರೀಮಿಯರ್ ನಲ್ಲಿ ವಿಜಯ್ ಗೊಂದು ಸೀಟ್: ವಿಭಿನ್ನವಾಗಿ ನಟನನ್ನು ಸ್ಮರಿಸಿದ ಚಿತ್ರತಂಡ

(Sandalwood director b s lingadevru letter to actor vijay )

Comments are closed.