ಮಾಡದ ತಪ್ಪಿಗೆ 3 ವರ್ಷ ಶಿಕ್ಷೆ : ಸೌದಿ ಜೈಲಿನಿಂದ ಬಿಡುಗಡೆ, ಆ.18 ಕ್ಕೆ ಹುಟ್ಟೂರಿಗೆ ಹರೀಶ್‌ ಬಂಗೇರ

ಕುಂದಾಪುರ : ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೋಟೇಶ್ವರ ಬೀಜಾಡಿಯ ನಿವಾಸಿ ಹರೀಶ್‌ ಬಂಗೇರ ಬಿಡುಗಡೆಗೊಂಡಿದ್ದಾರೆ. ಇದೇ ಅಗಸ್ಟ್‌ 18ರಂದು ಅವರು ಹುಟ್ಟೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಫೇಸ್‌ಬುಕ್‌ ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿ ಬರಹದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ನಿವಾಸಿ ಹರೀಶ್‌ ಬಂಗೇರ ಅವರು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದರು. ದುಬೈನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿ ಹರೀಶ್‌ ಬಂಗೇ ಮಂಗಳೂರಿನ ಸಿಎಎ ಗಲಭೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ನಂತರ ಬೆದರಿಕೆಯ ಹಿನ್ನೆಲೆಯ ವಿಡಿಯೋ ಜೊತೆಗೆ ತಮ್ಮ ಫೇಸ್‌ಬುಕ್‌ ಖಾತೆಯನ್ನೇ ಡಿಲೀಟ್‌ ಮಾಡಿದ್ದರು.

ಆದರೆ ಕಿಡಿಗೇಡಿಗಳು ಹರೀಶ್‌ ಬಂಗೇರ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆದು ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆಅವಹೇಳನಕಾರಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಸೌದಿಯಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹರೀಶ್‌ ಬಂಗೇರ ಅವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಹರೀಶ್‌ ಬಂಗೇರ ಪತ್ನಿ, ತನ್ನ ಪತಿ ಹೆಸರಲ್ಲಿ ಫೇಕ್‌ ಫೇಸ್‌ಬುಕ್‌ ಖಾತೆ ತೆರೆದಿರುವ ಕುರಿತು ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಎಸ್ಪಿ ನಿಶಾ ಜೇಮ್ಸ್‌ ಹಾಗೂ ಇಂದಿನ ಎಸ್ಪಿ ವಿಷ್ಣುವರ್ಧನ್‌ ಅವರು ಆರೋಪಿಗಳಾದ ಮೂಡಬಿದರೆಯ ಅಬ್ದುಲ್‌ ಹುಯೇಸ್‌ ಹಾಗೂ ಅಬ್ದುಲ್ ತುವೇಸ್‌ ಎಂಬವರನ್ನು ಬಂಧಿಸಿದ್ದರು. ‌

ಇದನ್ನೂ ಓದಿ :  ಭಾರತ ಸೇರಿ ‘ಕೆಂಪು ಪಟ್ಟಿ’ ದೇಶಗಳಿಗೆ ಭೇಟಿ : 3 ವರ್ಷ ಪ್ರಯಾಣ ನಿಷೇಧ ಹೇರಿದ ಸೌದಿ ಅರೇಬಿಯಾ

ಉಡುಪಿಯಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿರುವುದು ದೃಢಪಟ್ಟ ಬೆನ್ನಲ್ಲೇ ಸೌದಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹರೀಶ್‌ ಬಂಗೇರ ಅಮಾಯಕ ಅನ್ನೋದು ಸೌದಿ ಪೊಲೀಸರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹರೀಶ್‌ ಬಂಗೇಶ್‌ ಅವರನ್ನು ಬಿಡುಗಡೆ ಮಾಡಲಾಗಿದ್ದು, ಸೌದಿಯಲ್ಲಿರುವ ಅರೇಬಿಯಾ ಮಂಗಳೂರು ಅಸೋಸಿಯೇಷನ್‌ ಪ್ರಯಾಣದ ವೆಚ್ಚವನ್ನು ಭರಿಸಲು ಮುಂದೆ ಬಂದಿದೆ.

ತಾನು ಮಾಡದ ತಪ್ಪಿಗೆ ಮೂರು ವರ್ಷಗಳ ಕಾಲ ಹರೀಶ್‌ ಬಂಗೇರ ಸೌದಿಯ ಜೈಲಿನಲ್ಲಿ ಕೊಳೆಯಬೇಕಾಗಿತ್ತು. ಇತ್ತ ಮನೆ ಮಗ ಜೈಲು ಪಾಲಾಗುತ್ತಲೇ ಕುಟುಂಬ ಕಣ್ಣೀರಲ್ಲೇ ಕೈತೊಳೆಯುತ್ತಿತ್ತು. ಆದ್ರೀಗ ಉಡುಪಿ ಪೊಲೀಸರ ಕಾರ್ಯದಿಂದಾಗಿ ಹರೀಶ್‌ ಬಂಗೇರ ಬಿಡುಗಡೆಯ ಭಾಗ್ಯ ಕಾಣುವಂತಾಗಿದೆ.

Comments are closed.