Beach Clean : ತ್ಯಾಜ್ಯಮುಕ್ತ ಮಲ್ಪೆ ಬೀಚ್‌ ಪಣತೊಟ್ಟ ಯುವಬ್ರಿಗೆಡ್‌ : ನಿತ್ಯವೂ ಟನ್‌ಗಟ್ಟಲೆ ಕಸ ಸಂಗ್ರಹ

  • ಶಶಿಧರ ತಲ್ಲೂರಂಗಡಿ

ಉಡುಪಿ : ಸ್ವರೂಪ್ ಎಂಬ ಯುವಕ ಮಲ್ಪೆ ಕಲ್ಮಾಡಿಯ ಸಮೀಪದವನು. ಈಗಷ್ಟೇ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಕೆಲಸ ದೂರದ ಅಬುಧಾಬಿಯಲ್ಲಿ ಆದ್ದರಿಂದ ಹೋಗಲು ಇನ್ನೊಂದೆರಡು ತಿಂಗಳು ಬಾಕಿ ಇದೆ. ಸಮಯ ಕಳೆಯಲು ಸಮುದ್ರ ತೀರದಲ್ಲಿ ಬಂದು ಕುಳಿತು ಕೊಂಡಿರುತ್ತಿದ್ದ. ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಬಾಟಲ್ ಗಳನ್ನು ಕಂಡು ತನ್ನ ಗೆಳೆಯರಲ್ಲಿ ಅದನ್ನು ಸ್ವಚ್ಛಗೊಳಿಸುವ ಪ್ರಸ್ತಾಪ ಮಾಡಿದ್ದ ಗೆಳೆಯರಾರೂ ಸರಿಯಾಗಿ ಸ್ಪಂದಿಸದ ಕಾರಣ ತಾನೊಬ್ಬನೇ ಸ್ವಚ್ಛತೆಗೆ ಇಳಿದು ಬಿಟ್ಟಿದ್ದ. ಬೆಳಿಗ್ಗೆ 6 ಗಂಟೆಯಿಂದ ಸಂಜೆ ಆರರವರೆಗೆ ತಾನೊಬ್ಬನೇ ಕೆಲಸ ಮಾಡಿ ಸುಮಾರು 38 ಚೀಲಗಳಷ್ಟು ಕಸ ಒಟ್ಟು ಮಾಡಿದ್ದ.

ಈ ವಿಚಾರ ಯುವ ಬ್ರಿಗೇಡ್ ನ ಗಮನಕ್ಕೆ ಬಂದಿದೆ. ಕೂಡಲೇ ನಾವು ಯುವಕನೊಂದಿಗೆ ಕೈಜೋಡಿಸುವ ನಿರ್ಧಾರ ಮಾಡಿದೆವು. ಆ ನಿಮಿತ್ತ ಭಾನುವಾರ ಸಪ್ಟೆಂಬರ್‌ ೧೯ರಂದು ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ರಮ ಸುಮಾರು 11:30 ವರೆಗೂ ಮುಂದುವರೆಯಿತು. ಅಲ್ಲಲ್ಲಿ ಕುಡಿದು ಬಿಸಾಡಿದ ಬಾಟಲಿಗಳು ಸ್ವಲ್ಪ ಹೆಚ್ಚೆನ್ನುವಷ್ಟೇ ಇತ್ತು. ಕೆಲವಷ್ಟು ಮಾತ್ರೆಗಳು, ಪ್ಲಾಸ್ಟಿಕ್ ಬಾಟಲಿಗಳು, ತಿಂದು ಬಿಸಾಡಿದ ತಿಂಡಿಯ ಪ್ಯಾಕೆಟ್ ಗಳು ಇದೆಲ್ಲ ಮಾಮೂಲಿ ಬಿಡಿ. ಕೊನೆಗೆ ಉಪಯೋಗಿಸಿ ಬಿಸಾಡಿದ ಕಾಂಡೋಮ್ wrapper ಕೂಡಾ ಕಸದ ಜೊತೆಗೆ ಸಿಕ್ಕಿದೆ ಎಂದರೆ ಒಮ್ಮೆ ಯೋಚಿಸಬೇಕು ನಾವು ಎಲ್ಲಿದ್ದೇವೆ ಎಂದು. ಗುಟ್ಟಾಗಿ ಎಲ್ಲ ಮಾಡುವವರಿಗೆ ಉಪಯೋಗಿಸಿದ್ದನ್ನು ಅಷ್ಟೇ ಗುಟ್ಟಾಗಿ ವಿಲೇವಾರಿ ಮಾಡಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಇನ್ನೆಲ್ಲಿಯ ಸ್ವಚ್ಚತೆಯ ಪಾಠ ಹೇಳಬೇಕು.

ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಜನರೂ ಕೂಡಾ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಸುಮಾರು ಶೇ. 20 ಕೆಲಸವಷ್ಟೇ ಮುಗಿದಿದೆ. ಅದಾಗಲೇ ಒಂದು ಲೋಡ್ ಕಸ ರಾಶಿಯಾಗಿದೆ. ನಾವಂತೂ ಒಮ್ಮೆ ಆ ಭಾಗದಲ್ಲಿ ಬಿದ್ದ ಎಲ್ಲ ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ವಿಲೇವಾರಿ ಮಾಡಬೇಕೆಂಬ ನಿರ್ಧಾರ ಮಾಡಿಯಾಗಿದೆ. ಅದರಂತೆ ಪ್ರತಿ ನಿತ್ಯ ಬೆಳಿಗ್ಗೆ 6ರಿಂದ 9ರವರೆಗೆ ಸೇರಲಿದ್ದೇವೆ. ಈಗಾಗಲೆ 3 ದಿನಗಳ ಶ್ರಮದಾನ ಮುಗಿದಿದೆ.

ಪ್ರಸಿದ್ಧ ಯಕ್ಷಕವಿ ಪ್ರೊ. ಪವನ್ ಕಿರಣಕೆರೆ, ಯೋಗಿಶ್ ಮಲ್ಪೆ ಯವರೂ ನಮ್ಮೊಡನೆ ಮೂರು ದಿನಗಳಿಂದ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸುಬ್ರಹ್ಮಣ್ಯ, ಆಶಿಕ್, ದೀಕ್ಷಿತ್, ತುಳಸಪ್ಪ, ಸುದೀಪ್, ರೇಷ್ಮಾ ಅವರು ಕೂಡ ಸಾತ್‌ ಕೊಟ್ಟಿದ್ದು, ಕೈ ಜೋಡಿಸಲು ಇಚ್ಚೆ ಇರುವವರು ಬೆಳಿಗ್ಗೆ 6ಕ್ಕೆ ಪಡುಕೆರೆ ಸಮುದ್ರ ತೀರಕ್ಕೆ ಬನ್ನಿ ಅಲ್ಲೆ ಸಿಗೋಣ.

ಇದನ್ನೂ ಓದಿ : ಮಲ್ಪೆ ಬೀಚ್‌: ಸುಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

ಇದನ್ನೂ ಓದಿ : ಪ್ರಪಂಚದಲ್ಲಿವೆ ವಿಚಿತ್ರ ನಗರಗಳು ! ಅಚ್ಚರಿಯಾಗುತ್ತೆ ಇಲ್ಲಿನ ವಿಚಿತ್ರ ಸಂಗತಿ

( Waste free Malpe Beach Yuva brigade : tons of garbage collect daily )

Comments are closed.