ಮಂಗಳೂರು : Pramod Muthalik barred : ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಜರಂಗದಳ ನಾಯಕನ ಕೊಲೆಯು ಹಿಂದೂ ಕಾರ್ಯಕರ್ತರ ರೋಷವನ್ನು ಕುದಿಸುತ್ತಿದೆ . ಹೀಗಾಗಿ ಪ್ರತಿಕಾರದ ಕಿಚ್ಚು ಕರಾವಳಿ ನಾಡನ್ನು ಇನ್ನಷ್ಟು ಬೇಯಿಸುವುದು ಬೇಡ ಎಂಬ ನಿಟ್ಟಿನಲ್ಲಿ ಪೊಲೀಸ್ ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಆರ್ಎಸ್ಎಸ್ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಜಿಲ್ಲೆಗೆ ಬಂದು ಪ್ರಚೋದನಕಾರಿ ಭಾಷಣವನ್ನು ಮಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಪ್ರವೇಶವನ್ನು ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶವನ್ನು ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂದಿನಿಂದ ಮುಂದಿನ ಆದೇಶದವರೆಗೂ ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಪ್ರಮೋದ್ ಮುತಾಲಿಕ್ ಭೇಟಿ ನೀಡಬಹುದಾಗಿದೆ. ಇದನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಪ್ರವೇಶಿಸುವಂತಿಲ್ಲ. ಪ್ರಮೋದ್ ಮುತಾಲಿಕ್ ಈ ಹಿಂದೆ ಅನೇಕ ಭಾರಿ ಕೋಮು ಭಾವನೆಗಳನ್ನು ಕೆರಳಿಸುವ ಭಾಷಣಗಳನ್ನು ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಹದಗೆಟ್ಟ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಕೋಮು ಸೌಹಾರ್ದತೆ ಹದಗೆಟ್ಟು ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ ಆದೇಶ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ : CM Basavaraja Bommai : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ
Pramod Muthalik barred from entering Dakshina Kannada district