sand mafia :ಸಮುದ್ರಕ್ಕೂ ಲಗ್ಗೆ ಇಟ್ಟಿರುವ ಮರಳು ಮಾಫಿಯಾ, ಲಾರಿ ರಿವರ್ಸ್ ತಂದು ಸಿ.ಸಿ ಕ್ಯಾಮಾರ ಧ್ವಂಸ

ಮಂಗಳೂರು : sand mafia :ನದಿಯ ಒಡಲು ಬಗೆದು ಮರಳು ತೆಗೆಯುತ್ತಿದ್ದ ಅಕ್ರಮ ಮರಳು ದಂಧೆಕೋರರು ಇದೀಗ ಸಮುದ್ರದ ಮರಳಿಗೆ ಕನ್ನ ಹಾಕಿದ್ದಾರೆ. ಕಡಲ ನಗರಿ ಮಂಗಳೂರಿನಲ್ಲಿ ರಾಜಾರೋಷವಾಗಿ ಈ ಸಮುದ್ರ ಮರಳಿನ ದಂಧೆ ನಡೆಯುತ್ತಿದ್ದು, ರಾತ್ರಿಯಾಗುತ್ತಿದ್ದಂತೆ ರಾಶಿ ಮಾಡಿಟ್ಟ ಮರಳನ್ನು ಟಿಪ್ಪರ್ ಲಾರಿಗಳಿಗೆ ತುಂಬಿಸಿ ರವಾನಿಸಲಾಗುತ್ತಿದೆ. ಇದೀಗ ಅಕ್ರಮ ಬಯಲಿಗೆಳೆಯಲು ಜಿಲ್ಲಾಡಳಿತ ಹಾಕಿದ ಸಿಸಿ ಕ್ಯಾಮರವನ್ನೇ ಖದೀಮರು ಕಿತ್ತು ಬಿಸಾಡಿದ್ದಾರೆ.

ಹೌದು..ಕಡಲ ನಗರಿ ಮಂಗಳೂರಿನಲ್ಲಿ ಮರಳು ದಂಧೆಕೋರರ ಕಾರುಬಾರು ಹೆಚ್ಚಾಗಿದೆ. ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಮರಳು ಮಾಫಿಯಾ ಇದೀಗ ಸಮುದ್ರ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ. ಸಮುದ್ರದ ದಡದಲ್ಲಿನ ಮರಳನ್ನು ಅಕ್ರಮವಾಗಿ ತೆಗೆದು ಒಯ್ಯುತ್ತಿದ್ದು, ಸಮುದ್ರರಾಜನ ರೌದ್ರತೆಗೆ ಕಾರಣವಾಗುತ್ತಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಪುರ, ಕೋಡಿ ಕಡಲತೀರಗಳಲ್ಲಿ ಈ ಸಮುದ್ರ ಮರಳಿನ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಕಡಲ ತೀರದಲ್ಲಿ‌ ನಿರಂತರವಾಗಿ ರಾತ್ರಿ ವೇಳೆ ಮರಳು ಸಾಗಾಟ ಮಾಡುವುದನ್ನು ತಡೆಯಲು ದಕ್ಷಿಣಕನ್ನಡ ಜಿಲ್ಲಾಡಳಿತ ಸಿಸಿ ಕ್ಯಾಮರಾ ಅಳವಡಿಸಿತ್ತು. ಆದ್ರೆ ತಮ್ಮ ಅಕ್ರಮ ಕೆಲಸಕ್ಕೆ ಅಡ್ಡಿಪಡಿಸುವ ಸಿಸಿ ಕ್ಯಾಮರಾವನ್ನೇ ಮರಳು ದಂಧೆಕೋರರು ಇದೀಗ ಧ್ವಂಸಗೊಳಿಸಿದ್ದಾರೆ.

ಸಮುದ್ರದಿಂದ ಮರಳು ತೆಗೆಯುವ ಈ ಜಾಲವನ್ನು ಭೇದಿಸಬೇಕೆಂದು‌ ದಕ್ಷಿಣಕನ್ನಡ ಜಿಲ್ಲಾಧಿಕಾರಿ‌ ಡಾ ರಾಜೇಂದ್ರ ಕೆ.ವಿ ಅವರ ಸೂಚನೆಯಂತೆ ಎಲ್ಲೆಡೆ ಸಮುದ್ರ ತೀರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಉಳ್ಳಾಲದ ಕೋಟೆಪುರದ ಸಮುದ್ರ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪತ್ತೆ ಹಚ್ಚಲು ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆದ್ರೆ ನಿನ್ನೆ ತಡ ರಾತ್ರಿ ವ್ಯಕ್ತಿಯೋರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿಸಿ ಕ್ಯಾಮರಾ ಅಳವಡಿಸಿದ ಕಂಬಕ್ಕೆ ಹತ್ತಿ ಕ್ಯಾಮರಾ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ ಅದು ಸಾಧ್ಯವಾಗದೇ ಇದ್ದಾಗ ಮರಳು ತುಂದಿದ ಲಾರಿ‌ಯನ್ನು ರಿವರ್ಸ್ ತಂದು ಸಿಸಿ ಕ್ಯಾಮರಾ ಅಳವಡಿಸಿದ ಕಂಬಕ್ಕೆ ಡಿಕ್ಕಿ ಹೊಡೆಸಿ ಧ್ವಂಸಗೊಳಿಸಲಾಗಿದೆ. ಮರಳು ದಂಧೆಕೋರರು ಸಿಸಿ ಕ್ಯಾಮರಾವನ್ನು ಧ್ವಂಸಗೊಳಿಸುವ‌ ದೃಶ್ಯ ರೆಕಾರ್ಡ್ ಆಗಿದ್ದು ಖದೀಮರ ಕರಾಮತ್ತು ಬಯಲಾಗಿದೆ. ಸದ್ಯ ಜಿಲ್ಲಾಧಿಕಾರಿಗಳ ಸೂಚನೆಯಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಿಯಮ ಪ್ರಕಾರ ಕಡಲ ತೀರದಿಂದ ಮರಳು ತೆಗೆಯುವಂತಿಲ್ಲ. ಅಷ್ಟೇ ಅಲ್ಲದೇ ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ಸಮುದ್ರಕ್ಕೆ ಹಾನಿಯನ್ನುಂಟಾಗುವ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದ್ರೆ ಉಳ್ಳಾಲದ ಈ ಸಮುದ್ರ ಮರಳು ಮಾಫಿಯಾ ದರ್ಬಾರಿನ ಮುಂದೆ ಸರಕಾರದ ಯಾವುದೇ ಕಾನೂನು ಕಟ್ಟಳೆಗಳಿಗೆ ಬೆಲೆಯೇ ಇಲ್ಲದಾಗಿದೆ. ರಾತ್ರಿಯಾಗುತ್ತಿದ್ದಂತೆ ರಾಶಿ ಮಾಡಿಟ್ಟ ಮರಳನ್ನು ಟಿಪ್ಪರ್ ಲಾರಿಗಳಿಗೆ ತುಂಬಿಸಿ ಪಕ್ಕದ ಕೇರಳ ರಾಜ್ಯಕ್ಕೆ ರವಾನಿಸಲಾಗುತ್ತಿದೆ.

ಸಮುದ್ರದ ಮರಳಿನಲ್ಲಿ ಉಪ್ಪಿನ ಅಂಶ ಇರುವುದರಿಂದ ಸಾಮಾನ್ಯವಾಗಿ ಸಮುದ್ರದ ಮರಳನ್ನು ಕಟ್ಟಡ ನಿರ್ಮಾಣ ಕೆಲಸ ಕಾರ್ಯಕ್ಕೆ ಬಳಸುವುದಿಲ್ಲ. ಆದ್ರೆ ಕೋಟೆಪುರ ಭಾಗದ ಈ ಸಮುದ್ರ ಪ್ರದೇಶದಲ್ಲಿ ನದಿ ನೀರು ಬಂದು ಸಮುದ್ರ ಸೇರುವುದರಿಂದ ಈ ಭಾಗದಲ್ಲಿ ನದಿಯಲ್ಲಿ ಸಿಗುವಂತ ಮರಳು ಲಭ್ಯವಾಗುತ್ತೆ. ಹೀಗಾಗಿ ಇದೇ ಮರಳನ್ನು ಕೇರಳ ಭಾಗಕ್ಕೆ ಅಕ್ರಮವಾಗಿ ಸಾಗಾಟ ಮಾಡಿ ಮರಳು ದಂದೆಕೋರರು ಹಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಈ ಅಕ್ರಮ ಮರಳು ದಂಧೆಕೋರರನ್ನು ಹೆಡೆಮುರಿಕಟ್ಟಬೇಕಾಗಿದೆ.

ಇದನ್ನು ಓದಿ : Kerala Devotie death kolluru : ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಇಳಿದ ಕೇರಳದ ಮಹಿಳೆ ನೀರು ಪಾಲು

ಇದನ್ನೂ ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

The sand mafia, which is also attached to the sea, reverses the lorry and destroys the CC camera.

Comments are closed.