ಕ್ಯಾಬ್, ಟ್ಯಾಕ್ಸಿ, ಆಟೋ ಚಾಲಕರಿಗೆ 5,000 ರೂ. : ಸಹಾಯಧನ ಪಡೆಯೋದು ಹೇಗೆ ಗೊತ್ತಾ ?

0

ಬೆಂಗಳೂರು : ಕೊರೊನಾ ಲಾಕ್‌ಡೌನ್‌ನಿಂದಾಗಿ ತತ್ತರಿಸಿರುವ ಜನರ ಅನುಕೂಲಕ್ಕಾಗಿ ರಾಜ್ಯ ಸರಕಾರ 1,610 ಕೋ.ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದ್ರಲ್ಲೂ ರಾಜ್ಯದ 7.5 ಲಕ್ಷ ಟ್ಯಾಕ್ಸಿ, ಕ್ಯಾಬ್ ಹಾಗೂ ಆಟೋ ಚಾಲಕರಿಗೆ 5,000 ರೂಪಾಯಿಗಳ ಸಹಾಯಧನವನ್ನು ಘೋಷಣೆ ಮಾಡಲಾಗಿದೆ. ಆದರೆ ಸಹಾಯಧನ ಪಡೆಯೋದು ಹೇಗೆ ಅನ್ನೋ ಚಿಂತೆ ಹಲವರನ್ನು ಕಾಡುತ್ತಿದೆ.

ಇದೀಗ ವಿಶೇಷ ಪ್ಯಾಕೇಜ್‌ನಲ್ಲಿ ಘೋಷಣೆಯಾದ ಹಣವನ್ನು ಅರ್ಹ ಚಾಲಕರಿಗೆ ತಲುಪಿಸುವ ಸಲುವಾಗಿ ಸುತ್ತೋಲೆ ಹೊರಡಿಸಿರುವ ಸಾರಿಗೆ ಇಲಾಖೆ ಸೇವಾ ಸಿಂಧು ಜಾಲತಾಣದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸೇವಾ ಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಚಾಲಕರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಅದನ್ನು ಹೊರತು ಬೇರೆ ಯಾವುದೇ ರೂಪದಲ್ಲಿ ಸಲ್ಲಿಸಲಾಗುವ ಅರ್ಜಿ ಸ್ವೀಕೃತವಲ್ಲ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಯೋಜನೆ ಪಡೆಯಲು ಯಾವೆಲ್ಲಾ ಚಾಲಕರು ಅರ್ಹರಾಗಿದ್ದಾರೆ? ಮತ್ತು ಸರ್ಕಾರದ‌ ಷರತ್ತುಗಳೇನು ಎಂಬುದರ ಮಾಹಿತಿ ಇಲ್ಲಿದೆ.

  1. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
  2. ಫಲಾನುಭವಿಗಳು ದಿನಾಂಕ: 01-03-2020ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸೇವಾಸಿಂಧು ಪೋರ್ಟಲ್​​​ನಲ್ಲಿ ನಮೂದಿಸಬೇಕು.
  3. ಚಾಲಕರ ಆಧಾರ್ ಕಾರ್ಡ್ ವಿವರ, ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕು.
  4. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕ್​​ನ IFSC ಕೋಡ್, MICR ಕೋಡ್‌ಗಳ ವಿವರಗಳನ್ನು ಸಹ ಪೋರ್ಟಲ್​ಗೆ ನೀಡಬೇಕು.
  5. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.
  6. ಆಟೋರಿಕ್ಷಾ ಅಥವಾ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.
  7. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ಸೇವಾಸಿಂಧುವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ ಸೇವಾಸಿಂಧುವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.
  8. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಪರಿಹಾರ ಹಣವನ್ನ DBT ಮಾಡಬೇಕು ಅಥವಾ ಆನ್‌ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.
  9. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ ಅಥವಾ ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

https://sevasindhu.karnataka.gov.in/Sevasindhu/Kannada?ReturnUrl=%2F

Leave A Reply

Your email address will not be published.