ಮಂಗಳೂರಲ್ಲಿ ವಲಸೆ ಕಾರ್ಮಿಕರ ವಿಷಯದಲ್ಲಿ ಕಾಂಗ್ರೆಸ್ “ರಾಜಕೀಯ” ?

0

ಮಂಗಳೂರು : ಕೊರೊನಾ ಮಹಾಮಾರಿ ದೇಶದಾದ್ಯಂತ ಆತಂಕಕಾರಿಯಾಗಿ ಕಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೋಂಕು ವ್ಯಾಪಿಸುತ್ತಿದ್ದು, ಆತಂಕ ಮನೆ ಮಾಡಿದೆ. ಈ ನಡುವಲ್ಲೇ ವಲಸೆ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ನಡೆಸೋ ಮೂಲಕ ಕಾಂಗ್ರೆಸ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕೇಂದ್ರ ರಾಜ್ಯ ಸರಕಾರಗಳು ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅಗತ್ಯಕ್ರಮಕೈಗೊಂಡಿವೆ, ಆದರೆ ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಹಾಗೂ ರೈಲ್ವೆ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆಯ ವಿರುದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ. ಕೊರೊನಾದಂತಹ ಮಹಾಮಾರಿಯ ವಿರುದ್ದ ನಾವೆಲ್ಲಾ ಜೊತೆಯಾಗಬೇಕು. ಸರಕಾರದ ವ್ಯವಸ್ಥೆಗೆ ಸಹಕಾರ ನೀಡಬೇಕು. ಆದರೆ ಕಾರ್ಮಿಕರಿಗೆ ಘೋಷಣಾ ಫಲಕ ನೀಡಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿ ಸಾವಿರಾರು ಜನರು ಮೈದಾನದಲ್ಲಿ ಸೇರುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಕೆಳಮಟ್ಟದ ರಾಜಕೀಯಕ್ಕೆ ಇಳಿದಿರುವುದನ್ನು ತೋರಿಸುತ್ತದೆ ಅಂತಾ ಕಿಡಿಕಾರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ನಡುವಲ್ಲೇ ಮೈಕ್ ಹಿಡಿದು ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸೋ ಅಗತ್ಯವಿತ್ತೇ ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮಾತ್ರವಲ್ಲ ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಹಿತಿ ನೀಡುತ್ತಿದೆ. ಕೊರೊನಾ ಸಂದರ್ಭದಲ್ಲಿಯೇ ಇಂತಹ ಪ್ರತಿಭಟನೆಯ ಅಗತ್ಯವಿದೆಯೇ ಅನ್ನೋ ಕುರಿತು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆ ನಡೆಯುತ್ತಿದೆ. ಕೊರೊನಾ ವೈರಸ್ ಸೋಂಕಿನ ನಿಯಂತ್ರಣ, ಲಾಕ್ ಡೌನ್ ಕುರಿತು ಬಿಜೆಪಿ ನಾಯಕರ ದ್ವಂದ್ವ ಹೇಳಿಕೆ.

ಬಂಟ್ವಾಳದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿರುವುದು. ಕೊರೊನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಕ್ರೀಯೆಯಲ್ಲಾಗಿರುವ ಗೊಂದಲ, ಕೊರೊನಾ ಹಾಟ್ ಸ್ಪಾಟ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ವೈಫಲ್ಯ, ಲಾಭಿಗೆ ಮಣಿದು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಸೇರಿದಂತೆ ಹತ್ತಾರು ವಿಷಯಗಳಲ್ಲಿ ಶಾಸಕರು, ಸಚಿವರು, ಸರಕಾರ, ಜಿಲ್ಲಾಡಳಿತ ಎಡವಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಿಲ್ಲೆಯಲ್ಲಿ ಕೊರೊನಾದಿಂದ ಜನ ಸಾಯುತ್ತಿದ್ದಾರೆ, ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರವನ್ನು ಕಣ್ಣು ತೆರೆಯಿಸಬೇಕಾಗಿದ್ದ ಕಾಂಗ್ರೆಸ್ ನಾಯಕರಿಗೆ ಸಿಕ್ಕಿದ್ದು ವಲಸೆ ಕಾರ್ಮಿಕರು ಅನ್ನೋದೆ ದುರಂತ.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಬೇಕೆಂಬ ನಿಯಮವಿದೆ. ಜನನಾಯಕರು ಕೂಡ ಜನರಿಗೆ ಸಾಮಾಜಿಕ ಅಂತರದ ಅರಿವು ಮೂಡಿಸಬೇಕಿದೆ. ಆದ್ರೆ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರವೇ ಮಾಯವಾಗಿತ್ತು. ಜನನಾಯಕರು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರೋದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಪ್ರತಿಭಟನೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನ ಹಿರಿಯ ನಾಯಕರಾದ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಪಾಲ್ಗೊಳ್ಳದೆ ಇರುವುದು ಪ್ರತಿಭಟನೆಯ ವಿಷಯದಲ್ಲಿ ಕಾಂಗ್ರೆಸ್ ಗೆ ಸಹಮತವಿರಲಿಲ್ಲ ಅನ್ನೋದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

ಒಟ್ಟಿನಲ್ಲಿ ಪ್ರತಿಭಟಿಸಲೇ ಬೇಕಾದ ವಿಷಯಗಳನ್ನೆಲ್ಲಾ ಬದಿಗೊತ್ತಿ ಕಾಂಗ್ರೆಸ್ ವಲಸೆ ಕಾರ್ಮಿಕರ ಸಮಸ್ಯೆಯನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿದ್ದು ದುರಂತ.  ಕೊರೊನಾ ನಡುವಲ್ಲೇ ಪ್ರತಿಭಟನೆಯ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನಾದ್ರೂ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವಿರುದ್ದದ ಹೋರಾಟಕ್ಕೆ ಸರಕಾರದ ಕಣ್ಣು ತೆರೆಯಿಸಲಿ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯ ವೀಡಿಯೋ, ಕೊರೊನಾ ಆತಂಕದ ನಡುವಲ್ಲಿ ಪ್ರತಿಭಟನೆ ಅಗತ್ಯವೇ ?

https://youtu.be/8LCILgyPapY
Leave A Reply

Your email address will not be published.