ಶಿಕ್ಷಕರಿಗೆ ಸಿಕ್ಕಿಲ್ಲ ಕೊರೊನಾ ಟೆಸ್ಟ್ ರಿಪೋರ್ಟ್ : ಸ್ಯಾನಿಟೈಸ್ ಆಗದ ಶಾಲೆಗಳು…! ಶಿಕ್ಷಣ ಇಲಾಖೆಯ ಮತ್ತೊಂದು ಎಡವಟ್ಟು..!!

ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಶಾಲಾರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಶಾಲಾರಂಭದ ಮಾರ್ಗಸೂಚಿಯನ್ನೂ ಹೊರಡಿಸಿ 15 ದಿನಗಳೇ ಕಳೆದಿದೆ. ಆದರೆ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಅನುಷ್ಟಾನಗೊಳಿಸುವಲ್ಲಿ ಎಡವಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಕರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿದೆಯಾದ್ರೂ, ಕೊರೊನಾ ಪರೀಕ್ಷಾ ವರದಿ ಮಾತ್ರ ಶಿಕ್ಷಕರ ಕೈ ಸೇರಿಲ್ಲ…! ಹೀಗಾಗಿ ಆತಂಕದಿಂದಲೂ ಶಾಲೆಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬರೋಬ್ಬರಿ 10 ತಿಂಗಳ ನಂತರ ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾಗುತ್ತಿವೆ. ಜನವರಿ 1ರಿಂದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುತ್ತಿದೆ. ಜೊತೆಗೆ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಬೆಳಗಿನ ವೇಳೆಯಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ತರಗತಿಗಳು ನಡೆದ್ರೆ, ಮಧ್ಯಾಹ್ನ ವಿದ್ಯಾಗಮ ತರಗತಿಗಳು ನಡೆಸಲಾಗುತ್ತಿದೆ. ಕಳೆದ ಬಾರಿ ವಿದ್ಯಾರ್ಥಿಗಳ ಬಳಿಗೆ ತೆರಳಿ ಶಿಕ್ಷಕರು ವಿದ್ಯಾಗಮ ಪಠ್ಯ ಬೋಧನೆ ಮಾಡಲಾಗುತ್ತಿದ್ರೆ, ಈ ಬಾರಿ ಶಾಲೆಯ ಆವರಣರದಲ್ಲಿಯೇ ತರಗತಿಗಳು ನಡೆಯುತ್ತಿವೆ.

ರಾಜ್ಯ ಸರಕಾರ ಕೊರೊನಾ ವೈರಸ್ ಸೋಂಕು ಹರಡುವಿಕೆಯ ನಡುವಲ್ಲೇ ಶಾಲಾರಂಭ ಮಾಡುತ್ತಿದೆ. ಒಂದೆಡೆ ಕೊರೊನಾ ಇನ್ನೊಂದೆಡೆ ಯುಕೆ ವೈರಸ್ ಅಬ್ಬರ. ಹೀಗಾಗಿ ರಾಜ್ಯ ಸರಕಾರ ಶಾಲಾರಂಭಕ್ಕೆ ಮಾರ್ಗಸೂಚಿಯನ್ನು ಹೊರಡಿಸಿದೆ. ಶಾಲಾರಂಭಕ್ಕೆ 72 ಗಂಟೆಗಳ ಮೊದಲು ಶಿಕ್ಷಕರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ರಿಪೋರ್ಟ್ ಪಡೆದಿರಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ. ಆದರೆ ರಾಜ್ಯದ ಬಹುತೇಕ ಶಿಕ್ಷಕರಿಗೆ ಇನ್ನೂ ಕೊರೊನಾ ಟೆಸ್ಟ್ ಆಗಿಲ್ಲ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್ ನಡೆಸುತ್ತಿದ್ರೂ ನೂಕು ನುಗ್ಗಲು ಕಂಡುಬಂದಿದೆ. ಸಾಮಾಜಿಕ ಅಂತರವೂ ಕಂಡುಬಂದಿಲ್ಲ.

ಕಳೆದೆರಡು ದಿನಗಳಿಂದಲೂ ಶಿಕ್ಷಕರು ಕೊರೊನಾ ಟೆಸ್ಟ್ ಗೆ ಒಳಪಡುತ್ತಿದ್ದರೂ ಕೂಡ, ರಿಪೋರ್ಟ್ ಕೈ ಸೇರುವುದು ಜನವರಿ 3ರ ನಂತರವೇ. ಆದರೆ ಜನವರಿ 1ರಂದು ಶಾಲಾರಂಭಗೊಳ್ಳುತ್ತಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಕೈ ಸೇರುವ ಮೊದಲೇ ಶಿಕ್ಷಕರು ಶಾಲೆಗೆ ಹಾಜರಾಗಬೇಕಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಿಲ್ಲ. ಒಂದೊಮ್ಮೆ ಶಿಕ್ಷಕರ ಟೆಸ್ಟ್ ರಿಪೋರ್ಟ್ ನಲ್ಲಿ ಕೊರೊನಾ ಸೋಂಕು ಪತ್ತೆಯಾದ್ರೆ ಸೋಂಕು ವಿದ್ಯಾರ್ಥಿಗಳಿಗೂ ಹರಡುವ ಆತಂಕ ಸೃಷ್ಟಿಯಾಗಿದೆ.

ಮಕ್ಕಳು ಸುಮಾರು 10 ತಿಂಗಳ ನಂತರ ಶಾಲೆಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದಾಗಿ ಶಿಕ್ಷಣ ಇಲಾಖೆ ಹೇಳಿಕೊಂಡಿದೆ. ಮಾತ್ರವಲ್ಲ ಶಿಕ್ಷಣ ಸಚಿವರೇ ಖುದ್ದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶಾಲೆಗಳ ಸ್ಯಾನಿಟೈಸ್ ಮಾಡುವ ಹೊಣೆಯನ್ನು ನೀಡಿದ್ದರು. ಆದ್ರೆ ಬಹುತೇಕ ಶಾಲೆಗಳಲ್ಲಿ ಸ್ಯಾನಿಟೈಸ್ ನಡೆದೇ ಇಲ್ಲ. ಶಾಲಾರಂಭಕ್ಕೆ ಕನಿಷ್ಠ 24 ಗಂಟೆಯ ಮೊದಲಾದ್ರೂ ತರಗತಿಗಳನ್ನು ಸ್ಯಾನಿಟೈಸ್ ಮಾಡಬೇಕು. ಆದರೆ ಆ ಕಾರ್ಯವನ್ನು ಮಾಡಿಲ್ಲ. ಇನ್ನೊಂದೆಡೆ ಇಂದು ಶಾಲೆಗಳಲ್ಲಿ ಪೋಷಕರ ಸಭೆ ನಡೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ ಪೋಷಕರು ಶಾಲೆಗೆ ಆಮಿಸುತ್ತಿದ್ದಾರೆ. ಒಂದೊಮ್ಮೆ ಪೋಷಕರು ಕೊರೊನಾ ಸೋಂಕಿತರಾಗಿದ್ರೆ ಸರಕಾರವೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತೆ.

ಶಾಲೆಗಳನ್ನು ಆರಂಭ ಮಾಡುವ ಮೊದಲೇ ಮಾರ್ಗಸೂಚಿಯನ್ನು ಹೊರಡಿಸಿರುವ ಶಿಕ್ಷಣ ಇಲಾಖೆ ತನ್ನ ಆದೇಶವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಕನಿಷ್ಠ ವಾರದ ಮೊದಲೇ ಲಕ್ಷಾಂತರ ಶಿಕ್ಷಕರನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯವನ್ನಾ ದ್ರೂ ಮಾಡಬೇಕಿತ್ತು. ಆದರೆ ಶಾಲಾರಂಭಕ್ಕೆ ಎರಡು ದಿನಗಳ ಮೊದಲು ಟೆಸ್ಟ್ ಮಾಡಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡಂತಾಗಿದೆ.

ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯ ಸರಕಾರಕ್ಕಿರುವ ಕಾಳಜಿ ಒಪ್ಪುವಂತದ್ದು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಯುಕೆ ವೈರಸ್ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದ ಶಿಕ್ಷಣ ಇಲಾಖೆ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರೋದು ಎಷ್ಟು ಸರಿ ಅನ್ನೋದು ಪೋಷಕರ ಪ್ರಶ್ನೆ.

Comments are closed.