ಉಡುಪಿಯಲ್ಲಿ ತಗ್ಗಿದ ಕೊರೊನಾ ಅಬ್ಬರ : 81 ಮಂದಿಗೆ ಸೋಂಕು, ಇಬ್ಬರು ಬಲಿ

  • ಸುಶ್ಮಿತಾ ಸುಬ್ರಹ್ಮಣ್ಯ

ಉಡುಪಿ : ಕೊರೊನಾ ಆರ್ಭಟದಿಂದ ತತ್ತರಿಸಿದ ಉಡುಪಿಯಲ್ಲೀಗ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಜಿಲ್ಲೆಯಲ್ಲಿ ನೂರಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಹೊಸ ಸೋಂಕಿತರು ಪತ್ತೆಉಆಗಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ 81 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 193 ಮಂದಿ ಇಂದು ಸೋಂಕಿನಿಂದ ಗುಣಮುಖರಾಗಿದ್ದರೆ. ಅಲ್ಲದೇ ಜಿಲ್ಲೆಯಲ್ಲಿ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ ಈಗ 1289ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಸೋಮವಾರ ಒಂದೇ ದಿನ ಉಡುಪಿ ತಾಲೂಕಿನಲ್ಲಿ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆ.4ರಂದು ಖಾಸಗಿ ಆಸ್ಪತ್ರೆಗೆ ದಾಖಲಾದ 86 ವರ್ಷ ಪ್ರಾಯದ ವೃದ್ಧರು ಇಂದು ಮೃತಪಟ್ಟರೆ, ಆ.2ಕ್ಕೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾದ 61ರ ಹರೆಯದ ವೃದ್ಧರು ಸಹ ಇಂದು ನಿಧನರಾದರು. ಇಬ್ಬರೂ ಕೋವಿಡ್‌ನ ಮೂಲ ಗುಣಲಕ್ಷಣದೊಂದಿಗೆ ತೀವ್ರ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದಿಂದ ಬಳಲುತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 428 ಕ್ಕೇರಿದೆ.

ಇಂದು ಕೊರೋನ ಸೋಂಕು ದೃಢಪಟ್ಟ 81 ಮಂದಿಯಲ್ಲಿ 39 ಮಂದಿ ಪುರುಷರು ಹಾಗೂ 42 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 47 ಮಂದಿ ಉಡುಪಿ ತಾಲೂಕು, 11 ಮಂದಿ ಕುಂದಾಪುರ ಹಾಗೂ 22 ಮಂದಿ ಕಾರ್ಕಳ ತಾಲೂಕಿನವರಾಗಿದ್ದು, ಒಬ್ಬರು ಹೊರಜಿಲ್ಲೆಯವರು. ಇಂದು ಪಾಸಿಟಿವ್ ಬಂದವರಲ್ಲಿ 17 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 64 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ರವಿವಾರ ಒಟ್ಟು 193 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 69,228 ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3925 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 70,945ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,19,468 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಇಂದು ಸಹ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಬ್ಲ್ಯಾಕ್ ಫಂಗಸ್ ಸೋಂಕು ಇರುವ ರೋಗಿ ಪತ್ತೆಯಾಗಿಲ್ಲ. ಆದರೆ ಒಬ್ಬ ಸೋಂಕಿನಿಂದ ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹೀಗಾಗಿ ಸದ್ಯ ಹೊರಜಿಲ್ಲೆಗಳ ಏಳು ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. 9958 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಇಂದು 9958 ಮಂದಿಗೆ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಇವುಗಳಲ್ಲಿ 5512 ಮಂದಿಗೆ ಮೊದಲ ಡೋಸ್ ಹಾಗೂ 4446 ಮಂದಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 4257 ಮಂದಿ ಮೊದಲ ಹಾಗೂ 2730 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 1254 ಮಂದಿಗೆ ಮೊದಲ ಹಾಗೂ 1710 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಉಳಿದಂತೆ ಓರ್ವ ಆರೋಗ್ಯ ಕಾರ್ಯಕರ್ತ ಹಾಗೂ ಆರು ಮಂದಿ ಮುಂಚೂಣಿ ಕಾರ್ಯಕರ್ತರೂ ಲಸಿಕೆಯನ್ನು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,42,914 ಮಂದಿಗೆ ಮೊದಲ ಡೋಸ್ ಹಾಗೂ 1,98,182 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಏನೇ ಆದರು ಜನರು ಅಂತರವನ್ನು ಕಾಪಾಡಿಕೊಂಡು ಮಾಸ್ಕ್‌ ಧರಿಸಿ ಜಾಗರೂಕರಾಗಿರುವುದು ಸೂಕ್ತ.

Comments are closed.