Chandrasekhar Guruji : ಚಂದ್ರಶೇಖರ್​ ಗುರೂಜಿ ಯಾರು : ಇವರ ಹಿನ್ನೆಲೆ ಏನು, ಇಲ್ಲಿದೆ ಮಾಹಿತಿ

Background of Chandrasekhar Guruji : ಸರಳ ವಾಸ್ತು ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಚಿರಪರಿಚಿತರಾಗಿದ್ದ ಚಂದ್ರಶೇಖರ್​ ಗುರೂಜಿ ಜೀವನ ದಾರುಣ ಅಂತ್ಯವನ್ನು ಕಂಡಿದೆ. ಹಾಡಹಗಲೇ ಚಂದ್ರಶೇಖರ್​ ಗುರೂಜಿ ಆಪ್ತರು ಎನಿಸಿಕೊಂಡಿದ್ದವರೇ ಚಂದ್ರಶೇಖರ್​ ಗುರೂಜಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. ಹುಬ್ಬಳ್ಳಿಯ ಹೋಟೆಲ್​ನಲ್ಲಿ ತಂಗಿದ್ದ ಗುರೂಜಿಯನ್ನು ಮಹಂತೇಶ್​ ಶಿರೋಳ್​ ಹಾಗೂ ಮಂಜುನಾಥ್​ ದುಮ್ಮವಾಡ ಬರ್ಬರವಾಗಿ ಕೊಲೆಗೈದಿದ್ದಾರೆ.

ಹೋಟೆಲ್​ನ ರಿಸೆಪ್ಶನ್​ನಲ್ಲಿ ಗುರೂಜಿಗೆ ಕಾಯುತ್ತಿದ್ದ ಈ ಇಬ್ಬರು ಗುರೂಜಿ ಕೆಳಗಿಳಿದು ಬರುತ್ತಿದ್ದಂತೆಯೇ ಮಂಜುನಾಥ್​ ದುಮ್ಮವಾಡ ಗುರೂಜಿಗಳ ಕಾಲಿಗೆರೆಗಿದ್ದಾನೆ. ಇದನ್ನೇ ಎನ್​ಕ್ಯಾಶ್​ ಮಾಡಿಕೊಂಡ ಮಹಂತೇಶ್​ ಸಿನಿಮೀಯ ರೀತಿಯಲ್ಲಿ ಚಂದ್ರಶೇಖರ್​ ಗುರೂಜಿಯ ಮೇಲೆರೆಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ ಈ ಬರ್ಬರ ಕೃತ್ಯ ಸ್ಪಷ್ಟವಾಗಿ ಸೆರೆಯಾಗಿದೆ.

ಇಂದು ಅಮಾನವೀಯವಾಗಿ ಕೊಲೆಯಾಗಿರುವ ಚಂದ್ರಶೇಖರ್ ಗುರೂಜಿಯ ಪೂರ್ಣ ಹೆಸರು ಚಂದ್ರಶೇಖರ ವಿರೂಪಾಕ್ಷಪ್ಪ ಅಂಗಡಿ. ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದ ಚಂದ್ರಶೇಖರ್​ ಶಿಕ್ಷಣವನ್ನು ಬಾಗಲಕೋಟೆಯಲ್ಲಿಯೇ ಪೂರೈಸಿದ್ದಾರೆ. ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಸಿವಿಲ್​ ವಿಭಾಗದಲ್ಲಿ ಇಂಜಿನಿಯರಿಂಗ್​ ಪದವಿಯನ್ನು ಪಡೆದಿದ್ದಾರೆ. ಇಂಜಿನಿಯರಿಂಗ್​ ಶಿಕ್ಷಣವನ್ನು ಪೂರೈಸಿದ ಬಳಿಕ 1988ರಲ್ಲಿ ಮುಂಬೈಗೆ ತೆರಳಿದ್ದ ಗುರೂಜಿ ಆರು ವರ್ಷಗಳ ಕಾಲ ಇಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದರು.

ಮುಂಬೈನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಇವರು ಬಳಿಕ ಪ್ರಯಾಣ ಬೆಳೆಸಿದ್ದು ಸಿಂಗಾಪುರಕ್ಕೆ. ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರವನ್ನು ಕಲಿತು ಮುಂಬೈಗೆ ವಾಪಸ್ಸಾಗಿದ್ದ ಗುರೂಜಿ ಇಲ್ಲಿ ಸರಳ ವಾಸ್ತು ಎಂಬ ಕಚೇರಿಯನ್ನು ಆರಂಭಿಸಿದರು. ಕಾಲ ಕ್ರಮೇಣ ಬೆಂಗಳೂರು , ಹುಬ್ಬಳ್ಳಿಗಳಲ್ಲಿಯೂ ಇವರ ಸರಳ ವಾಸ್ತು ಕಚೇರಿ ಆರಂಭಗೊಂಡಿತು.

ಬಾಗಲಕೋಟೆ ಹುಂಡೇಕಾರ ಓಣಿಯಲ್ಲಿ ಈಗಲೂ ಗುರೂಜಿಯ ಮನೆಯಿದೆ. ಸದ್ಯ ಈ ಮನೆಯನ್ನು ಬಾಡಿಗೆಗೆ ನೀಡಲಾಗಿದೆ. ಇಂಜಿನಿಯರಿಂಗ್​ ಪದವಿ ಮುಗಿಸಿ ಕೆಲಸವಿಲ್ಲದೇ ಮನೆಯಲ್ಲಿದ್ದ ಚಂದ್ರಶೇಖರರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು ಇವರ ಸೋದರ ಸಂಬಂಧಿ ಬಸವರಾಜ್​ ಉಮನೂರು ಎಂಬವರು. ಆದರೆ ಸದ್ಯ ಗುರೂಜಿ ಬಾಗಲಕೋಟೆ ಕಡೆಗೆ ಬಂದಿರಲಿಲ್ಲ. ಚಂದ್ರಶೇಖರ್​ ಗುರೂಜಿಗೆ ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರು ಇದ್ದಾರೆ.ಇವರಲ್ಲಿ ಓರ್ವ ಸಹೋದರಿ ನಿಧನರಾಗಿದ್ದಾರೆ .

ಮೊದಲನೇ ದಾಂಪತ್ಯದಲ್ಲಿ ಒಂದು ಹೆಣ್ಣು ಮಗುವನ್ನು ಹೊಂದಿದ್ದ ಚಂದ್ರಶೇಖರ್​ ಗುರೂಜಿ ಮೊದಲ ಪತ್ನಿ ನಿಧನದ ಬಳಿಕ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ಅಂಕಿತಾಗೆ ಮಕ್ಕಳಿರಲಿಲ್ಲ. ಪ್ರಸ್ತುತ ಅಂಕಿತಾ ಬೆಂಗಳೂರಿನಲ್ಲಿ ವಾಸವಿದ್ದಾರೆ.

ಇದನ್ನು ಓದಿ : murder of Chandrasekhar Guruji : ಚಂದ್ರಶೇಖರ್​ ಗುರೂಜಿ ಸಾವಿಗೆ ಆ ಮಹಿಳೆಯೇ ಕಾರಣ..? ಅನುಮಾನಕ್ಕೆಡೆ ಮಾಡಿದ ಬೇನಾಮಿ ಆಸ್ತಿ

ಇದನ್ನೂ ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

Background of Chandrasekhar Guruji

Comments are closed.