ಬಾಗಲಕೋಟೆ: ಗೆಳೆಯನ ಹೆಂಡತಿ ಜೊತೆ ಸಲುಗೆಗೆ ಪ್ರಾಣವೇ ಹೋಯ್ತು! ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ
Karnataka News | Latest Crime News: ಬಾಗಲಕೋಟೆ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದ ಹಿನ್ನೆಲೆಯಲ್ಲಿ, ನಂಬಿದ್ದ ಗೆಳೆಯನೊಬ್ಬ ತನ್ನ ಸ್ನೇಹಿತನನ್ನೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಜರುಗಿದೆ.
ಘಟನೆಯ ವಿವರ:
ಖಾನಾಪುರ ಎಸ್‌ಕೆ ಗ್ರಾಮದ ನಿವಾಸಿ ಸೋಮಶೇಖರ್ ಕಿಳ್ಳಿಕೇತರ (45) ಕೊಲೆಯಾದ ದುರ್ದೈವಿ. ಈತನನ್ನು ಅದೇ ಗ್ರಾಮದ ನಿವಾಸಿ ಹಾಗೂ ಮದ್ಯಪಾನದ ಗೆಳೆಯನೂ ಆಗಿದ್ದ ಸಂಜೀವ್ ಕಿಳ್ಳಿಕೇತರ (28) ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾನೆ. ಆರೋಪಿ ಸಂಜೀವ್ ಮತ್ತು ಸೋಮಶೇಖರ್ ಹತ್ತಿರದ ಸ್ನೇಹಿತರಾಗಿದ್ದರು.
ಅನುಮಾನವೇ ಮುಳುವಾಯಿತು:
ಸೋಮಶೇಖರ್ ತನ್ನ ಪತ್ನಿಯೊಂದಿಗೆ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದದ್ದು ಮತ್ತು ಅತಿಯಾದ ಸಲುಗೆ ಬೆಳೆಸಿಕೊಂಡಿದ್ದು ಸಂಜೀವ್‌ನ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಚಾರವಾಗಿ ಸಂಜೀವ್ ಈ ಹಿಂದೆಯೇ ಸೋಮಶೇಖರ್‌ನಿಗೆ ಎಚ್ಚರಿಕೆ ನೀಡಿ, ಜೀವ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ. ಆದರೂ ಸೋಮಶೇಖರ್ ತನ್ನ ವರ್ತನೆ ಬದಲಿಸಿಕೊಳ್ಳದಿದ್ದಾಗ, ಸಂಜೀವ್ ಹತ್ಯೆಗೆ ಸಂಚು ರೂಪಿಸಿದ್ದನು.
ಮದ್ಯದ ನಶೆಯಲ್ಲಿ ಜಜ್ಜಿ ಕೊಲೆ:
ಭಾನುವಾರ ಮಧ್ಯಾಹ್ನ ಸಂಜೀವ್ ತನ್ನ ಪ್ಲಾನ್‌ನಂತೆ ಸೋಮಶೇಖರ್‌ನನ್ನು ಮದ್ಯ ಕುಡಿಯಲು ಊರ ಹೊರಗಿನ ಮಾವಿನ ತೋಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಸೋಮಶೇಖರ್‌ನಿಗೆ ಅತಿಯಾಗಿ ಮದ್ಯ ಕುಡಿಸಿ, ಆತ ಪ್ರಜ್ಞೆ ಕಳೆದುಕೊಂಡು ನಶೆಯಲ್ಲಿದ್ದಾಗ ಭಾರಿ ಗಾತ್ರದ ಕಲ್ಲಿನಿಂದ ಆತನ ಮುಖ ಮತ್ತು ತಲೆಯನ್ನು ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದನು.
ಅಪ್ರಾಪ್ತ ವಯಸ್ಕನಿಗೆ ಸ್ಕೂಟರ್ ನೀಡಿದ ಮಾಲೀಕಳ ವಿರುದ್ಧ ಪ್ರಕರಣ ದಾಖಲು
ಪೊಲೀಸ್ ತನಿಖೆ:
ಸೋಮಶೇಖರ್ ಕಾಣೆಯಾದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ತೋಟದಲ್ಲಿ ಶವ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬಾದಾಮಿ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಸಂಜೀವ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



