ಸಿಲಿಕಾನ್ ಸಿಟಿಯಲ್ಲಿ ಶೂಟೌಟ್ : ಬನ್ನಂಜೆ ರಾಜಾ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ

ಬೆಂಗಳೂರು : ಸಿಲಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜನ ಸಹಚರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಮನೀಶ್ ಶೆಟ್ಟಿ(45 ವರ್ಷ) ಎಂಬಾತನೇ ಶೂಟೌಟ್ ಗೆ ಬಲಿಯಾದವನು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ರಾತ್ರಿ 9 ಸುಮಾರಿಗೆ ಈ ಘಟನೆ ನಡೆದಿದೆ.

ಬೈಕ್​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಡಬಲ್ ಬ್ಯಾರಲ್ ಗನ್​ನಿಂದ 45 ವರ್ಷದ ಮನೀಶ್ ಶೆಟ್ಟಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮಾತ್ರವಲ್ಲದೇ ಚಾಕುವಿನಿಂದಲೂ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮನೀಶ್​ನನ್ನು ಕೂಡಲೇ ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಿಸಲಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಮನೀಶ್ ಶೆಟ್ಟಿ ಡುಯಟ್ ಲೇಡೀಸ್ ಬಾರ್ ವ್ಯವಹಾರವನ್ನು ನಡೆಸುತ್ತಿದ್ದ. ಭೂಗತ ಪಾತಕಿ ಬನ್ನಂಜೆ ರಾಜಾ, ರವಿ ಪೂಜಾರಿ ಅವರ ಆಪ್ತನಾಗಿದ್ದ ಮನೀಶ್ ಶೆಟ್ಟಿ ಪಾತಕ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡಿದ್ದ. ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿಯೂ ಈತನೇ ಪ್ರಮುಖ ಆರೋಪಿಯಾಗಿದ್ದು, ಈತನ ವಿರುದ್ದ ಮಂಗಳೂರು, ಬಾಂಬೆ, ಬೆಂಗಳೂರಿನಲ್ಲಿಯೂ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಮನೀಶ್ ಶೆಟ್ಟಿ ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹತ್ಯೆಗೈದ ಆರೋಪಿಗಳು ಬೈಕ್ ಹಾಗೂ ರಿವಾಲ್ವಾರ್ ಎಸೆದು ಪರಾರಿಯಾಗಿದ್ದಾರೆ. ಉಡುಪಿಯ ಹಿರಿಯಡ್ಕದಲ್ಲಿ ನಡೆದಿದ್ದ ಕಿಶನ್ ಹೆಗ್ಡೆ ಹತ್ಯೆ ಪ್ರಕರಣಕ್ಕೂ ಮನೀಶ್ ಶೆಟ್ಟಿ ಹತ್ಯೆಗೂ ನಂಟಿದೆಯಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಸ್ಥಳಕ್ಕೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಅನುಚೇತ್, ಪೊಲೀಸ್ ಕಮಿಷನರ್ ಕಮಲ್ ಪಂತ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

Comments are closed.