ರೈತರ ಹೆಸರಲ್ಲಿ ಬ್ಯಾಂಕಿಗೆ ವಂಚಿಸಿದ ಕಾಂಗ್ರೆಸ್ ಮುಖಂಡ: ಕಿಶನ್ ಹೆಗ್ಡೆ ಕೊಳ್ಕೆಬೈಲ್ ವಿರುದ್ದ ಪ್ರಕರಣ ದಾಖಲು

ಉಡುಪಿ : ಬ್ಯಾಂಕಿನಲ್ಲಿ ಬೇನಾಮಿ ರೈತರ ಹಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲೀಗ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕಿ ಉಷಾ ಸುವರ್ಣ ವಿರುದ್ದವೂ ಪ್ರಕರಣ ದಾಖಲಾಗಿದೆ.

ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಆರೋಪಿಗಳಿಬ್ಬರು ನಬಾರ್ಡ್‌ ಯೋಜನೆಯಡಿ ರೈತರಿಗೆ ಸಿಗುವ ಸವಲತ್ತುಗಳನ್ನು ಸ್ವಂತಕ್ಕೆ ಉಪಯೋಗಿಸಿ ಸರಕಾರದ ಬಡ್ಡಿ ಸಹಾಯಧನವನ್ನು ಒಂದನೇ ಆರೋಪಿ ಕಿಶನ್‌ ಹೆಗ್ಡೆ (4.32ಲಕ್ಷ ರೂ.) ಮತ್ತು 2ನೇ ಆರೋಪಿ ಉಷಾ ಸುವರ್ಣ(3.85ಲಕ್ಷ ರೂ.) ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿಗಳು ಅವರ ಸ್ವತ: ಮತ್ತು ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಬೇನಾಮಿ ಸಾಲಗಳನ್ನು ಪಡೆದು ಕೃಷಿಯೇತರ ಭೂಮಿಗೂ ಕೃಷಿ ಸಾಲ ನೀಡಿ ವಂಚಿಸಿದ್ದಾರೆ.

ಬ್ಯಾಂಕ್‌ನ ಸದಸ್ಯರಲ್ಲದವರಿಗೂ ಸಾಲ ನೀಡಿ ರೈತಾಪಿ ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ತಾವೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಬ್ಯಾಂಕ್‌ನ ನಿಯಮಗಳನ್ನು ಮೀರಿ ಯಾವುದೇ ದಾಖಲೆಗಳನ್ನು ಅಡಮಾನವಾಗಿರಿಸದೆ, ಜಾಮೀನುದಾರರ ಸಹಿ ಪಡೆಯದೆ ಲಕ್ಷಾಂತರ ಮೊತ್ತದ ಸಾಲವನ್ನು ಆರೋಪಿಗಳೇ ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ನಷ್ಟವುಂಟು ಮಾಡಿರುವುದು ಮಾತ್ರವಲ್ಲ, ಕಾನೂನು ಉಲ್ಲಂಘಿಸಿ ಸರಕಾರಕ್ಕೆ ಮತ್ತು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಆಡಳಿತ ಮಂಡಳಿಯ ಅನುಮತಿ ಪಡೆಯದೆ ಸಾಲ ಪಡೆದು ಕೃಷಿಕರಲ್ಲದವರಿಗೂ ಕೃಷಿ ಸಾಲ ನೀಡಿ ಸರಕಾರದ ನಿಯಮ ಮೀರಿ ಬಡ್ಡಿ ವಿನಾಯಿತಿಗೊಳಿಸಿದ್ದು, ಸ್ವಹಿತಕ್ಕಾಗಿ ಬ್ಯಾಂಕಿಗೆ ದ್ರೋಹ ಮಾಡಿ ಭಾರೀ ನಷ್ಟವುಂಟು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲೀಗ ಉಡುಪಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸದಾಶಿವ ಕರ್ಕೆರ, ಆಡಳಿತ ಮಂಡಳಿಯ ಸರ್ವಾನುಮತದ ನಿರ್ಣಯದೊಂದಿಗೆ ಉಡುಪಿ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದೂರು ಆಲಿಸಿರುವ ನ್ಯಾಯಾಲಯ ಆರೋಪಿಗಳ ವಿರುದ್ದ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲೀಗ ನ್ಯಾಯಾಲಯದ ಆದೇಶ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ನಿರ್ಣಯದಂತೆ ಇದೀಗ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ವಿರುದ್ದ ಈಗಾಗಲೇ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಅಲ್ಲದೇ ಜಿಲ್ಲೆಯ ವಿವಿಧ ಹಣಕಾಸು ಸಂಸ್ಥೆಗಳಲ್ಲಿಯೂ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಸಾಲ ಪಡೆದಿರುವ ಕುರಿತು ವಿವಿಧ ಠಾಣೆಗಳಲ್ಲಿಯೂ ದೂರು ದಾಖಲಾಗಿದೆ.

ಕಿಶನ್ ಹೆಗ್ಡೆ ಅವರು ಸಹಕಾರಿ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಭಾರಿ ವಂಚನೆ ಎಸಗಿದ್ದಾರೆ ಎಂದು ಉಡುಪಿ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸದಾಶಿವ ಕರ್ಕೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments are closed.