ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ರೌಡಿಶೀಟರ್ ಹಾಗೂ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ ಸತೀಶ್ ಕುಲಾಲ್ ಹಾಗೂ ಉಡುಪಿ ಜಿಲ್ಲೆಯ ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿ ಎಂಬವರೇ ಬಂಧಿತ ಆರೋಪಿಗಳು. ಅಕ್ಟೋಬರ್ 20 ರಂದು ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ಕರೆ ಸ್ವೀಕಾರ ಮಾಡದ ಹಿನ್ನೆಲೆಯಲ್ಲಿ ಸ್ನೇಹಿತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್ ನಲ್ಲಿರುವ ಪ್ಲ್ಯಾಟ್ ಬಳಿ ಬಂದು ನೋಡಿದ್ದಾರೆ. ಈ ವೇಳೆಯಲ್ಲಿ ಪ್ಲ್ಯಾಟ್ ಒಳಗಿನಿಂದ ರಕ್ತದ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೊಲೀಸರು ಬಂದು ಪ್ಲ್ಯಾಟ್ ನಲ್ಲಿ ನೋಡಿದಾಗ ಸುರೇಂದ್ರ ಬಂಟ್ವಾಳ ಹತ್ಯೆಯಾಗಿರೋದು ಪತ್ತೆ ಯಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣವನ್ನು ಬೇಧಿಸಲು ಒಟ್ಟು ಮೂರು ತಂಡಗಳನ್ನು ರಚಿಸ ಲಾಗಿತ್ತು. ಅಲ್ಲದೇ ಅಪಾರ್ಟ್ ಮೆಂಟ್ ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಪ್ಲ್ಯಾಟ್ ಗೆ ಬಂದು ಹೋಗಿರುವುದು ಪತ್ತೆಯಾಗಿತ್ತು.

ಈ ನಡುವಲ್ಲೇ ಸುರೇಂದ್ರನ ಪರಮಾಪ್ತ ಸ್ನೇಹಿತ ಸತೀಶ್ ಕುಲಾಲ್ ಕೂಡ ನಾಪತ್ತೆಯಾಗಿದ್ದು, ಪೊಲೀಸರ ಅನುಮಾನ ಮೂಡುವಂತೆ ಮಾಡಿತ್ತು. ಅಲ್ಲದೇ ಮರುದಿನವೇ ಸತೀಶ್ ಕುಲಾಲ್ ತಾನೇ ಸುರೇಂದ್ರ ಬಂಟ್ವಾಳನನ್ನು ಹತ್ಯೆ ಮಾಡಿರುವುದಾಗಿಯೂ ಹೇಳಿದ್ದಾನೆ. ಹಿರಿಯಡ್ಕದಲ್ಲಿ ನಡೆದಿದ್ದ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ ಎನ್ನುವುದಾಗಿಯೂ ಆಡಿಯೋದಲ್ಲಿ ತಿಳಿಸಿದ್ದಾನೆ. ಪೊಲೀಸರು ಈ ಹಿನ್ನೆಲೆಯಲ್ಲಿ ಆರೋಫಿಗಳಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಸತೀಶ್ ಕುಲಾಲ್ ಹಾಗೂ ಗಿರಿ ಕಾಸರಗೋಡಿನಿಂದ ಬಂಟ್ವಾಳಕ್ಕೆ ಬಾಡಿಗೆ ವಾಹನದಲ್ಲಿ ಬರುತ್ತಿದ್ದಾರೆ ಅನ್ನೋ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ ನಾಲ್ಕು ದಿನಗಳ ನಂತರ ಆರೋಪಿಗಳು ಪತ್ತೆಯಾಗಿದ್ದು, ಇಬ್ಬರನ್ನೂ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed.