ಐಷಾರಾಮಿ ಕಾರಿಗಾಗಿ ದುಬಾರಿ ಸುಳ್ಳು ! ಉಪ್ಪೂರಿನ ವೈದ್ಯೆ ಸೇರಿ, ಇಬ್ಬರ ಬಂಧನ

0

ಉಡುಪಿ : ಆಕೆಗೆ ದುಬಾರಿ ಕಾರು ಕೊಳ್ಳಬೇಕೆಂಬ ಆಸೆ. ಹೀಗಾಗಿ ಬ್ಯಾಂಕಿನಲ್ಲಿ ಲೋನ್ ಗಾಗಿ ಅರ್ಜಿ ಸಲ್ಲಿಸಿದ್ದಾಳೆ. ಅರ್ಜಿಯನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿಗೆ ಆಘಾತ ಎದುರಾಗಿತ್ತು. ಬ್ಯಾಂಕಿಗೆ ವಂಚಿಸುವುದಕ್ಕೆ ಹೊರಟ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೊಳಗಾಗಿರುವ ಉಪ್ಪೂರು ಸಾಲ್ಮರ ನಿವಾಸಿ ಡಾ.ರೆನಿಟಾ ಸೋನಿಯಾ ಡಿಸೋಜಾ ಐಷಾರಾಮಿ ಕಾರು ಖರೀದಿಗೆ ಸಾಲ ಪಡೆಯಲು ಮುಂದಾಗಿದ್ದಳು. ಇದಕ್ಕಾಗಿ ಕಾಪು ಮೂಡಬೆಟ್ಟಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ಅರ್ಜಿ ಸಲ್ಲಿಸಿದ್ದಳು. ನಾನು ಮಣಿಪಾಲದಲ್ಲಿ ವೈದ್ಯೆಯಾಗಿದ್ದೇನೆ ಮತ್ತು ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಅಲ್ಲದೆ, ತನಗೆ ಮಾಸಿಕ 2.66 ಲಕ್ಷ ಸಂಬಳವಿದೆ ಎಂದು ನಕಲಿ ದಾಖಲೆ ಸಹ ಸೃಷ್ಟಿಸಿದ್ದಳು.

ವೇತನದ ಸ್ಲಿಪ್ ಪರಿಶೀಲಿನೆ ನಡೆಸಲು ಮಣಿಪಾಲ ಸಂಸ್ಥೆಗೆ ಈ ಮೇಲ್ ಮಾಡಿದ್ದಾರೆ. ಈ ವೇಳೆಯಲ್ಲಿ ರೆನಿಟಾ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿಲ್ಲಾ ಅಂತಾ ಹೇಳಿದ್ದಾರೆ. ಅಲ್ಲದೇ ಆಕೆ ನಮ್ಮ ಸಂಸ್ಥೆಯಲ್ಲಿ ವೈದ್ಯೆ ವೃತ್ತಿ ಮಾಡಿಲ್ಲವೆಂದಿದ್ದಾರೆ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಅಲ್ವಿನಾ ಡಿಸೋಜಾ ಕಾಪು ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ರೆನಿಟಾ ಡಿಸೋಜಾ ಹಾಗೂ ಆಕೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿಯನ್ನು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದ ಲ್ಯಾಪ್ ಟಾಪ್ ಗಳನ್ನು ಕೂಡ ವಶ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳು ಬೇರೆ ಕಡೆಗಳಲ್ಲಿಯೂ ಇಂತಹದ್ದೇ ವಂಚನೆ ನಡೆಸಿದ್ದಾರಾ ಅನ್ನುವ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Leave A Reply

Your email address will not be published.