ಅತಿದೊಡ್ಡ ಸೈಬರ್ ವಂಚನೆ : ವೈದ್ಯೆಗೆ 4.47 ಕೋಟಿ ಪಂಗನಾಮ ಹಾಕಿದ ವಂಚಕರು

ನವದೆಹಲಿ : Delhi doctor cyber fraud : ಸೈಬರ್‌ ವಂಚನೆ ಪ್ರಕರಣದ ಕುರಿತು ಪೊಲೀಸರು ಅರಿವು ಮೂಡಿಸುತ್ತಿದ್ದರೂ ಕೂಡ ಜನರು ಮಾತ್ರ ಪದೇ ಪದೇ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಇದೀಗ ವೈದ್ಯೆಯೋರ್ವರು ಬರೋಬ್ಬರಿ 4.47 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾವು ಮಹಾರಾಷ್ಟ್ರ ಮಾದಕ ವಸ್ತು ವಿಭಾಗದ ಅಧಿಕಾರಿಗಳು ಎಂದು ನಂಬಿಸಿ 34 ವರ್ಷದ ವೈದ್ಯೆಯೋರ್ವರಿಂದ ಬರೋಬ್ಬರಿ 4.47 ಕೋಟಿ ರೂಪಾಯಿ ವಂಚಿಸಿರುವ ಅತೀ ದೊಡ್ಡ ಸೈಬರ್‌ ವಂಚನೆ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಫೆಡ್‌ಎಕ್ಸ್‌ ಕೋರಿಯರ್‌ನಲ್ಲಿ ವೈದ್ಯೆಯೋರ್ವರಿಗೆ ಪಾರ್ಸೆಲ್‌ ಬಂದಿದ್ದು, ಇದರಲ್ಲಿ 140 ಗ್ರಾಂ ಮಾದಕ ವಸ್ತು ಎಂಡಿಎಂಎ ಪತ್ತೆಯಾಗಿದೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ನೀವು ಮಾದಕ ವಸ್ತು ಮಾರಾಟದಿಂದ ಬಂದ ಹಣವನ್ನು ಸ್ವೀಕರಿಸಿದ್ದೀರಿ ಎಂದು ವಂಚಕರು ವೈದ್ಯೆಯೋರ್ವರಿಗೆ ಸ್ಕೈಪ್‌ ಕಾಲ್‌ ಮೂಲಕ ತಿಳಿಸಿದ್ದರು. ಅಲ್ಲದೇ ವೈದ್ಯಯ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ತಾತ್ಕಾಲಿಕವಾಗಿ ಹಸ್ತಾಂತರ ಮಾಡುವಂತೆಯೂ ತಿಳಿಸಿದ್ದರು.

ಮುಂಬೈನಿಂದ ತೈವಾನ್‌ಗೆ ಕೋರಿಯರ್‌ ಮೂಲಕ ಪಾರ್ಸೆಲ್‌ ಅನ್ನು ಎಪ್ರಿಲ್‌ 21 2023ರಂದು ಬುಕ್‌ ಮಾಡಲಾಗಿದೆ. ಅಲ್ಲದೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 25,025 ರೂಪಾಯಿ ಶುಲ್ಕ ಹಾಗೂ ಜಿಎಸ್‌ಟಿ ಕೂಡ ಪಾವತಿ ಮಾಡಲಾಗಿದೆ ಎಂದು ವಂಚಕರು ವೈದ್ಯೆಗೆ ತಿಳಿಸಿದ್ದರು. ಆದರೆ ವೈದ್ಯೆ ತಾನು ಯಾವುದೇ ಪಾರ್ಸೆಲ್‌ ಕಳುಹಿಸಿಲ್ಲ ಎಂದು ತಿಳಿಸಿದಾಗ. ನಿಮ್ಮ ವಿರುದ್ದ ಅಂಧೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವಂತೆ ತಿಳಿಸಿದ್ದಾರೆ. ನೀವು ಅಂಧೇರಿ ಠಾಣೆಯ ಇನ್‌ಸ್ಪೆಕ್ಟರ್‌ ಸ್ಮಿತಾ ಪಾಟೀಲ್‌ ಅವರನ್ನು ಸಂಪರ್ಕಿಸಿ ಆನ್‌ಲೈನ್‌ ಮೂಲಕ ಪ್ರಕರಣ ದಾಖಲು ಮಾಡುವಂತೆ ಸಲಹೆಯನ್ನೂ ಕೊಟ್ಟಿದ್ದಾರೆ.

ವಂಚಕರ ಸೂಚನೆಯ ಮೇರೆಗೆ ವೈದ್ಯೆ ಸ್ಕೈಪ್‌ ಆಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಸ್ಮಿತಾ ಪಾಟೀಲ್‌ ಎಂದು ಪರಿಚಯಿಸಿಕೊಂಡು ಮಹಿಳೆಯೋರ್ವಳು ವೈದ್ಯೆಗೆ ಸ್ಕೈಪ್‌ ಮೂಲಕ ಕರೆ ಮಾಡಿದ್ದಾಳೆ. ನಿಮ್ಮ ಆಧಾರ್‌ ಐಡಿಯನ್ನು ದಾಖಲೆಯಾಗಿ ನೀಡಿ 23 ಬ್ಯಾಂಕ್‌ ಖಾತೆಯನ್ನು ತೆರೆಯಲಾಗಿದೆ ಎಂದು ನಂಬಿಸಿದ್ದಾರೆ. ಹೀಗಾಗಿ ನಿಮ್ಮನ್ನು ಬಂಧಿಸಿ ವಿಚಾರಣೆಗ ಒಳಪಡಿಸಲಾಗುವುದು ಎಂದು ಸ್ಮಿತಾ ಪಾಟೀಲ್‌ ಎಂಬಾಕೆ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಹೆದರಿದ ವೈದ್ಯೆಯಿಂದ ಎಲ್ಲಾ ಖಾತೆಗಳ ಸ್ಕ್ರೀನ್‌ ಶಾಟ್‌ ತರಿಸಿಕೊಂಡು ನಂತರ ಹಂತ ಹಂತವಾಗಿ ವೈದ್ಯೆಯ ಬ್ಯಾಂಕ್‌ ಖಾತೆಯಲ್ಲಿರುವ 4.5 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ.

ಇದೀಗ ವೈದ್ಯೆ ನೀಡಿದ ದೂರಿನ ಆಧಾರದ ಮೇರೆಗೆ ದೆಹಲಿ ಪೊಲೀಸರು ವಂಚಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ತನಿಖೆಯನ್ನು ಆರಂಭಿಸಿದ್ದಾರೆ. ದೆಹಲಿಯಲ್ಲಿ ನಡೆದಿರುವ ಅತೀ ದೊಡ್ಡ ಸೈಬರ್‌ ವಂಚನೆ (Delhi doctor cyber fraud) ಪ್ರಕರಣ ಇದಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ : ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವ ವೇಳೆ ದುರಂತ : ಯುವತಿ ಬಲಿ

ಇದನ್ನೂ ಓದಿ : RBI Ban Rs 2000 Currency : ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದು ಹೇಗೆ ಗೊತ್ತೆ ?

Comments are closed.