ಮಿಸ್ ಕಾಲ್ ನಿಂದ ತಗಲಾಕೊಂಡ ಪಾತಕಿ ರವಿ ಪೂಜಾರಿ !

0

ಬೆಂಗಳೂರು : ಒಂದು ಕಾಲದಲ್ಲಿ ದೇಶವನ್ನೇ ನಡುಗಿಸಿದ್ದ ಭೂಗತ ಪಾತಕಿಯನ್ನ ಸೆರೆ ಹಿಡಿಯೋಕೆ ಪೊಲೀಸರು ಯತ್ನಿಸಿದ್ದು ಅಷ್ಟು ಇಷ್ಟಲ್ಲ. ಬರೋಬ್ಬರಿ 15 ವರ್ಷಗಳ ನಂತರ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿ ಭಾರತಕ್ಕೆ ಕರೆತಂದಿದ್ದಾರೆ. ಆದರೆ ತನ್ನ ಸುತ್ತಲೂ ಏಳು ಸುತ್ತಿನ ಕೋಟೆಯನ್ನೇ ಕಟ್ಟಿಕೊಂಡಿದ್ದ ರವಿ ಪೂಜಾರಿ ಪೊಲೀಸರ ಕೈಲಿ ಸಿಕ್ಕಿ ಹಾಕಿಕೊಳ್ಳೋದಕ್ಕೆ ಕಾರಣವಾಗಿದ್ದು ಮಿಸ್ ಕಾಲ್ !

ರವಿ ಪೂಜಾರಿ.. ಈ ಹೆಸರು ಕೇಳಿದ್ರೆ ಸಾಕು ಜನಸಾಮಾನ್ಯರು, ಅಷ್ಟೇ ಯಾಕೆ ಉದ್ಯಮಿಗಳು, ರಾಜಕಾರಣಿಗಳು, ಬಾಲಿವುಡ್ ನಟ ನಟಿಯರೇ ಬೆಚ್ಚಿ ಬೀಳುತ್ತಿದ್ರು. 90ರ ದಶಕಗಳಲ್ಲಿ ಭೂಗತ ಪಾತಕಿ ತನ್ನ ದುಷ್ಕೃತ್ಯಗಳಿಂದಲೇ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದ ರವಿ ಪೂಜಾರಿ ಮುಂಬೈ, ಮಂಗಳೂರು, ಬೆಂಗಳೂರು ಮಾತ್ರವಲ್ಲ ಕೇರಳದಲ್ಲಿಯೂ ಜನರನ್ನು ನಡುಗಿಸಿಬಿಟ್ಟಿದ್ದ. ಆದರೆ ಕಳೆದ 15 ವರ್ಷಗಳಿಂದಲೂ ಭೂಗತನಾಗಿದ್ದ ರವಿ ಪೂಜಾರಿ ಆಫ್ರಿಕಾದ ಸೆನೆಗಲ್ ಸೇರಿಕೊಂಡಿದ್ದ. ಯಾರಿಗೂ ತನ್ನು ಗುರುತು ಸಿಗಬಾರದು ಅಂತಾ ತನ್ನ ಹೆಸರನ್ನು ಆಂಟೋನಿ ಫೆರ್ನಾಂಡಿಸ್ ಬದಲಾಯಿಸಿಕೊಂಡಿದ್ದ.

ಸೆನೆಗಲ್ ನಗರ

ಸೆನೆಗಲ್ ನಲ್ಲಿ ಉತ್ತರ ಭಾರತದ ಅನಿವಾಸಿ ಭಾರತೀಯರೋರ್ವರ ಜೊತೆಗೂಡಿ ವ್ಯವಹಾರವನ್ನು ನಡೆಸುತ್ತಿದ್ದ ಪಾತಕಿ ರವಿ ಪೂಜಾರಿ ತನ್ನದೇ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡಿದ್ದ. ತನ್ನ ಟ್ರಸ್ಟ್ ಮೂಲಕ ಜನಸಾಮಾನ್ಯರಿಗೆ ನೆರವಾಗೋ ಮೂಲಕ ಸೆನೆಗಲ್ ಜನರ ಮನಗೆದ್ದಿದ್ದ. ಅಂಟೋನಿ ಫೆರ್ನಾಂಡಿಸ್ ಜನಪರ ಕಾರ್ಯ ಪತ್ರಿಕೆ, ಟಿವಿಗಳಲ್ಲಿಯೂ ಬಿತ್ತರವಾಗಿತ್ತು. ತಾನೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಲೇ ಬಾರದು ಅಂತಾ ತನಗೆ ಬೇಕಾದ ಬಿಗಿ ಭದ್ರತೆನ್ನು ಮಾಡಿಕೊಂಡಿದ್ದ. ಸೆನೆಗಲ್ ನಲ್ಲಿ ವಾಸವಿದ್ದ ರವಿ ಪೂಜಾರಿಯನ್ನು ಸಂಪರ್ಕ ಮಾಡೋದು ಕೂಡ ಸಹಚರರಿಗೆ ಅಷ್ಟು ಸುಲಭವಾಗಿರಲಿಲ್ಲ. ಎಲ್ಲಿಯೂ ತನ್ನ ಮಾಹಿತಿ ಸೋರಿಕೆಯಾಗಬಾರದು ಅಂತಾ ಅಷ್ಟೋಂದು ಗೌಪ್ಯವಾಗಿಯೇ ವ್ಯವಹಾರವನ್ನು ಮಾಡಿಕೊಂಡು ಬರ್ತಿದ್ದ. ಮೊಬೈಲ್ ಕರೆ ಮಾಡಿದ್ರೆ ಎಲ್ಲಿ ಪೊಲೀಸರ ಕೈಲಿ ಸಿಕ್ಕಿ ಹಾಕಿಕೊಳ್ತೀನಿ ಅನ್ನೋ ಭಯದಲ್ಲಿಯೇ ರವಿ ಪೂಜಾರಿ, ವಿಓಐಪಿ ( ವಾಯ್ಸ್ ಓವರ್ ಇಂಟರ್ ನೆಟ್ ಪ್ರೋಟೋಕಾಲ್ ) ಕರೆ ಮಾಡಿ ಎಲ್ಲಾ ವ್ಯವಹಾರವನ್ನೂ ನಡೆಸುತ್ತಿದ್ದ. ಯಾರಾದ್ರೂ ಪೂಜಾರಿಗೆ ಕರೆ ಮಾಡಬೇಕಾದ್ರೆ ಆತನ ಮೊಬೈಲ್ ಗೆ ಮಿಸ್ ಕಾಲ್ ಕೊಡಬೇಕಿತ್ತು. ಮಿಸ್ ಕಾಲ್ ಕೊಟ್ಟ ನಂತರ ಪೂಜಾರಿ ವಿಓಐಪಿ ಮೂಲಕ ಕರೆ ಮಾಡಿ ವ್ಯವಹಾರ ನಡೆಸುತ್ತಿದ್ದ. ಪಾತಕಿ ರವಿ ಪೂಜಾರಿ ಭೂಗತನಾದ ದಿನದಿಂದಲೂ ಇಂದಿನವರೆಗೂ ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದು, ಇದೇ ವಿಓಐಪಿ ಮೂಲಕವೇ. ಹೀಗಾಗಿಯೇ ರವಿ ಪೂಜಾರಿ ಸಹಚರರು, ಮಗ ಹಾಗೂ ಪತ್ನಿಯನ್ನು ಬಂಧಿಸಿದ್ದರೂ ಕೂಡ ಪೊಲೀಸರಿಗೆ ರವಿ ಪೂಜಾರಿಯನ್ನು ಬಂಧಿಸೋದಕ್ಕೆ ಸಾಧ್ಯವಾಗಿರಲಿಲ್ಲ.


ರವಿ ಪೂಜಾರಿ ಬೆದರಿಕೆಯ ಕುರಿತು ದೇಶದಾದ್ಯಂತ ಹಲವು ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರಿಗೆ ಈ ವಿಓಐಪಿ ವ್ಯೂಹವನ್ನು ಬೇಧಿಸೋದು ಅಷ್ಟು ಸುಲಭ ಮಾತಾಗಿರಲಿಲ್ಲ. ಆದರೆ ಗುಪ್ತದಳದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಈ ವಿಓಐಪಿ ಜಾಡನ್ನು ಬೇಧಿಸವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ ಪಾತಕಿ ಬನ್ನಂಜೆ ರಾಜಾನನ್ನು ಬಂಧಿಸಿದ್ದ ಪೊಲೀಸರು ರವಿ ಪೂಜಾರಿಯ ಬಂಧನಕ್ಕೂ ಅದೇ ತಂತ್ರಗಾರಿಕೆಯನ್ನು ಹಣೆದಿದ್ದರು. ರವಿ ಪೂಜಾರಿ ಮಿಸ್ ಕಾಲ್ ಮಾಡ್ತಿದ್ದ ಮೊಬೈಲ್ ನಂಬರ್, ರವಿ ಪೂಜಾರಿಯ ಪಾಲುದಾರನ ಮಾಹಿತಿ ಕಲೆ ಹಾಕಿದ ಪೊಲೀಸರು ರವಿ ಪೂಜಾರಿಯನ್ನು ಲಾಕ್ ಮಾಡಿದ್ದಾರೆ.

ಒಟ್ಟಿನಲ್ಲಿ ಮೂರು ದಶಕಗಳ ಕಾಲ ಜನರನ್ನು ಉದ್ಯಮಿಗಳನ್ನು ರಾಜಕಾರಣಿಗಳನ್ನು ಸಿನಿಮಾ ತಾರೆಯರನ್ನು ಹಫ್ತಾ ಹೆಸರಲ್ಲಿ ಬೆದರಿಸುತ್ತಿದ್ದ ರವಿ ಪೂಜಾರಿ ಕೇವಲ ಮಿಸ್ ಕಾಲ್ ನಿಂದ ಬಂಧಿತನಾಗಿದ್ದಾನೆ.

Leave A Reply

Your email address will not be published.