ಪತ್ನಿಯ ಕೊಂದು ಪ್ರಿಯತಮೆಗೆ 200 ಬಾರಿ ಕಾಲ್ !

0

ಚಿಕ್ಕಮಗಳೂರು : ದಂತ ವೈದ್ಯ ಡಾ.ರೇವಂತ್ ಮಾಡಿದ್ದ ಆ ಒಂದು ತಪ್ಪು ಮೂರು ಜೀವಗಳನ್ನೇ ಬಲಿ ಪಡೆದಿದೆ. ಅಮಲು ಇಂಜೆಕ್ಷನ್ ಕೊಟ್ಟು ಬಾಣಂತಿ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದ ವೈದ್ಯ, ತನ್ನ ಪ್ರೇಯಸಿಗೆ 200 ಬಾರಿ ಕಾಲ್ ಮಾಡಿ ಪ್ರೇಮ ಸಲ್ಲಾಪ ನಡೆಸಿದ್ದ. ಹೀಗಾಗಿಯೇ ರೇವಂತ್ ಪೊಲೀಸರ ಕೈಲಿ ತಗಲಾಕೊಂಡಿದ್ದ ಅನ್ನೋದು ಇದೀಗ ಬಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಕವಿತಾ ಬರ್ಬರ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಮಾಹಿತಿಗಳು ಹೊರ ಬೀಳುತ್ತಿದೆ. ಹಾಡುಹಗಲಲ್ಲೇ ಜನನಿಬಿಡ ಪ್ರದೇಶದಲ್ಲಿದ್ದ ಆ ಮನೆಯಲ್ಲಿ ಬಾಣಂತಿಯನ್ನು ತನ್ನ 5 ತಿಂಗಳ ಮಗುವಿನ ಎದುರಲ್ಲೇ ಹತ್ಯೆ ಮಾಡಲಾಗಿತ್ತು. ಪ್ರಕರಣದ ಜಾಡು ಬೇಧಿಸೋದಕ್ಕೆ ಹೊರಟಿದ್ದ ಪೊಲೀಸರಿಗೆ ಶಾಕ್ ಕಾದಿತ್ತು. ಆರಂಭದಲ್ಲಿ ದರೋಡೆಕೋರರ ಕೃತ್ಯವೆಂದು ಬಾವಿಸಿದ್ದ ಪೊಲೀಸರಿಗೆ ಪ್ರಕರಣ ಬೇಧಿಸೋದಕ್ಕೆ ಕೆಲವೇ ಗಂಟೆಗಳು ಸಾಕಾಗಿ ಹೋಗಿತ್ತು.

ಕವಿತಾ ಹತ್ಯೆಯಾಗಿರೋ ಸುದ್ದಿಕೇಳಿ ಕಡೂರಿಗೆ ಓಡೋಡಿ ಬಂದಿದ್ದ ಆಕೆಯ ಪೋಷಕರು ಮನೆಯಲ್ಲಿನ ದೃಶ್ಯಕಂಡು ಬೆಚ್ಚಿಬಿದ್ದಿದ್ದರು. ಕವಿತಾ ಗಂಡನ ಬಗ್ಗೆ ಕೇಳಿದ್ರೆ ಕವಿತಾ ತಾಯಿ ತನ್ನ ಅಳಿಯ ದೇವರಂತವನು ಅಂದಿದ್ರು. ಆದ್ರೆ ತನ್ನ ಮಗಳು ಅಪರಿಚಿತರು ಮನೆಗೆ ಬಂದ್ರೆ ಬಾಗಿಲು ತೆರೆಯೋದೇ ಇಲ್ಲಾ. ಹೀಗಾಗಿ ಪರಿಚಿತರೇ ಈ ಕೃತ್ಯವೆಸಗಿರಬಹುದು ಅನ್ನೋ ಸಣ್ಣದೊಂದು ಸಂಶಯವನ್ನು ಪೊಲೀಸರಿಗೆ ಹೇಳಿದ್ರು. ಕವಿತಾಳನ್ನು ಇಂಜೆಕ್ಷನ್ ಕೊಟ್ಟು ನಿದ್ದೆಗೆ ಜಾರಿಸಿ ನಿಷ್ಪಾಪಿಯಂತೆ ಬಾಣಂತಿಯ ಕತ್ತನ್ನ ಮಗುವಿನ ಎದುರಲ್ಲೇ ಕತ್ತರಿಸಿ ಹಾಕಿದ್ದ ಡಾ.ರೇವಂತ್ ಮನೆಗೆ ಬಂದು ಪತ್ನಿಯ ಶವದ ಮುಂದೆ ಕಣ್ಣೀರು ಸುರಿಸೋ ನಾಟಕವಾಡಿದ್ದ.

ಆದರೆ ಕವಿತಾ ಕೊಲೆಯಾದ ದಿನದಿಂದಲೂ ರೇವಂತ್ ನಡವಳಿಕೆ ಸಂಶಯದಿಂದ ಕೂಡಿತ್ತು. ಯಾವತ್ತೂ ಮಗನನ್ನು ತನ್ನ ಕ್ಲಿನಿಕ್ ಗೆ ಕರೆದುಕೊಂಡು ಹೋಗಿರದ ರೇವಂತ್ ಆವತ್ತು ಮಗ ತಾಯಿ ಎಲ್ಲಿ ಅಂತಾ ಕೇಳುತ್ತಲೇ, ಆಕೆ ಟಾಯ್ಲೆಟ್ ಗೆ ಹೋಗಿದ್ದಾಳೆ ಅಂತಾ ಹೇಳಿ, ಮಗನನ್ನು ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದ. ಮಗನ ಜೊತೆಗೆ ಮಸಾಲೆ ದೋಸೆಯನ್ನು ತಿನ್ನುತ್ತಾ ಪೋಟೋ ಕ್ಲಿಕ್ಕಿಸಿ ಮೈ ಸನ್ ವಿಥ್ ಫೇಮಸ್ ಹೋಟೆಲ್ ಬೀರೂರು ಅಂತಾ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದ. ಸಾಲದಕ್ಕೆ ತನ್ನ ತಾಯಿಗೂ ಕರೆ ಮಾಡಿ ಕ್ಲಿನಿಕ್ ಗೆ ಬರುವಂತೆ ತಿಳಿಸಿದ್ದ. ಅಲ್ಲದೇ ತನ್ನ ಪರಿಚಿತರು ಜರೂರು ಕೆಲಸವಿದೆ ಅಂದ್ರೂ ಅವರನ್ನ ಕ್ಲಿನಿಕ್ ನಲ್ಲಿಯೇ ಕೂರಿಸಿಕೊಂಡು ಗಂಟೆಗಟ್ಟಲೆ ಮಾತಾಡಿದ್ದಾನೆ. ಆದರೆ ಈ ನಡುವಲ್ಲೇ ತನ್ನ ಪ್ರೇಯಸಿ ಹರ್ಷಿತಾಗೆ ಕರೆ ಮಾಡಿ ವಿಷಯವನ್ನೂ ತಿಳಿಸಿ ಗಂಟೆಗಟ್ಟಲೆ ಮಾತನಾಡಿದ್ದಾನೆ.

ಅದ್ಯಾವಾಗ ಕವಿತಾ ತಾಯಿ ಪರಿಚಿತರೇ ಈ ಕೃತ್ಯವೆಸಗಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ರೋ ಆವಾಗ್ಲೆ ಕಡೂರು ಠಾಣೆಯ ಪೊಲೀಸರು ಕೂಡ ಅಲರ್ಟ್ ಆಗಿದ್ರು. ರೇವಂತ್ ಹಾಗೂ ಕವಿತಾ ಸಂಬಂಧಿಕರ ಮಾಹಿತಿಗಳನ್ನು ಕಲೆಹಾಕಿದ್ರು. ಆದರೆ ಡಾ.ರೇವಂತ್ ಬಗ್ಗೆ ಸಣ್ಣದೊಂದು ಅನುಮಾನ ಕೂಡ ಪೊಲೀಸರಿಗೆ ಇರಲಿಲ್ಲ. ಕೊಲೆಯ ನಂತರ ರೇವಂತ್ ನಡವಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಇದೇ ಕಾರಣಕ್ಕೆ ರೇವಂತ್ ಕಾಲ್ ಡಿಟೇಲ್ಸ್ ತೆಗೆಯೋ ಸಾಹಸಕ್ಕೆ ಕೈಹಾಕಿದ್ರು. ಈ ನಡುವಲ್ಲೇ ಕವಿತಾ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದಿತ್ತು. ಶವದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯನ್ನು ಸಾಯಿಸೊ ಮೊದಲು ನಿದ್ರೆಯ ಇಂಜೆಕ್ಷನ್ ನೀಡಲಾಗಿತ್ತು ಅನ್ನೋ ಮಾಹಿತಿ ಪೊಲೀಸರಿಗೆ ತಿಳಿದಿತ್ತು.

ಹಾಗಾದ್ರೆ ಇದು ದರೋಡೆಕೋರರ ಕೃತ್ಯವಲ್ಲ. ಕವಿತಾಗೆ ಅತ್ಯಂತ ಪರಿಚಿತರೇ ಈ ಕೃತ್ಯವನ್ನು ಎಸಗಿರಬಹುದು ಅನ್ನೋ ಅನುಮಾನ ದೃಢವಾಗಿತ್ತು. ಅದೇ ಹೊತ್ತಲ್ಲೇ ಡಾ.ರೇವಂತ್ ಮೊಬೈಲ್ ಕಾಲ್ ಡಿಟೇಲ್ಸ್ ಪೊಲೀಸರ ಕೈ ಸೇರಿತ್ತು. ಕಾಲ್ ಡಿಟೇಲ್ಸ್ ನೋಡಿದ ಪೊಲೀಸರು ಅರೆ ಕ್ಷಣ ದಂಗಾಗಿ ಹೋಗಿದ್ರು. ಪತ್ನಿ ಸಾವನ್ನಪ್ಪಿದ್ಗ ದುಖಃದಲ್ಲಿದ್ದ ರೇವಂತ್ ಅದೊಂದು ನಂಬರ್ ಗೆ ಬರೋಬ್ಬರಿ 200 ಬಾರಿ ಕರೆ ಮಾಡಿದ್ದ. ಮಾತ್ರವಲ್ಲ ಗಂಟೆಗಟ್ಟಲೆ ಮಾತನಾಡಿದ್ದ. ಇಂತಹ ಟೈಮ್ ನಲ್ಲಿ ರೇವಂತ್ ಅಷ್ಟು ಬಾರಿ ಕರೆ ಮಾಡಿ ಮಾತಾಡೋ ಅಗತ್ಯವೇನಿತ್ತು ಅನ್ನೋ ಪ್ರಶ್ನೆ ಕಡೂರು ಠಾಣೆಯ ಪೊಲೀಸರನ್ನು ಕಾಡಿತ್ತು. ಹೀಗಾಗಿಯೇ ರೇವಂತ್ ಮೊಬೈಲ್ ನ ಸಂಪೂರ್ಣ ಕಾಲ್ ಡಿಟೇಲ್ಸ್ ತೆಗೆಯೋದಕ್ಕೆ ಮನಸ್ಸು ಮಾಡಿದ್ರು. ಅದೇ ಹೊತ್ತಿಗಾಗಲೇ ರೇವಂತ್ ಹರ್ಷಿತಾ ಪ್ರೇಮ ಪುರಾಣ ಬಯಲಾಗಿತ್ತು. ಇಬ್ಬರೂ ಅದೆಷ್ಟೋ ಗಂಟೆಗಳ ಕಾಲ ಮಾತನಾಡಿದ್ದ ಮಾಹಿತಿ ಬಹಿರಂಗವಾಗಿತ್ತು. ಆ ಕರೆಗೂ ಕವಿತಾ ಕೊಲೆಗೂ ಏನಾದ್ರೂ ಸಂಬಂಧವಿದ್ಯಾ ಅನ್ನೋ ಅನುಮಾನ ಪೊಲೀಸರನ್ನು ಕಾಡಿತ್ತು.

ಹೀಗಾಗಿಯೇ ಡಾ.ರೇವಂತ್ ನನ್ನ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಎಲ್ಲಿಯೂ ನೀವೇ ಕೊಲೆ ಮಾಡಿದ್ದೀರಿ, ತಮ್ಮ ಬಳಿ ಮಾಹಿತಿ ಇದೇ ಅನ್ನೋ ವಿಷಯವನ್ನು ಪೊಲೀಸರು ಬಾಯ್ಬಿಟ್ಟಿರಲಿಲ್ಲ. ಅದ್ಯಾವಾಗ ರೇವಂತ್ ಕಾಲ್ ಡಿಟೇಲ್ಸ್ ಪೊಲೀಸರ ಕೈ ಸೇರಿದೆ. ಜೊತೆಗೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಇಂಜೆಕ್ಷನ್ ಕೊಟ್ಟಿರೋ ವಿಚಾರ ಬಹಿರಂಗವಾಗಿತ್ತೋ ಆವಾಗ್ಲೆ ರೇವಂತ್ ಸೈಲೆಂಟಾಗಿದ್ದ. ಇನ್ನು ತನ್ನಾಟ ನಡೆಯೋದಿಲ್ಲಾ ಅನ್ನೋದನ್ನು ಪಕ್ಕಾ ಮಾಡಿಕೊಂಡೇ ತನ್ನ ಪ್ರೇಯಸಿಗೂ ವಿಷಯ ತಿಳಿಸಿದ್ದ. ಬೆಳಗೆದ್ದವನೇ ಸೀದಾ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರೋ ಮಸಾಲಾ ಡಾಬಾದ ಬಳಿಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟಿದ್ದ. ಅತ್ತ ಆತನ ಪ್ರೇಯಸಿ ಕೂಡ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ರೇವಂತ್ ಮಾಡಿದ್ದ ಆತುರದ ನಿರ್ಧಾರ ಇಂದು ಮೂರು ಜೀವಗಳನ್ನು ಬಲಿ ಪಡೆದಿದೆ. ಮಾತ್ರವಲ್ಲ, ಮೂವರು ಮಕ್ಕಳನ್ನ ಅನಾಥರನ್ನಾಗಿಸಿದೆ. ಒಟ್ಟಿನಲ್ಲಿ ನೂರಾರು ಕನಸು ಕಂಡು ಗಂಡನ ಕೈಹಿಡಿದಿದ್ದ ಕವಿತಾ ಬರ್ಬರವಾಗಿ ಹತ್ಯೆಯಾಗಿದು ಮಾತ್ರ ದುರಂತವೇ ಸರಿ.

Leave A Reply

Your email address will not be published.