ಗುರುರಾಘವೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷರ ಆಸ್ತಿ ಜಪ್ತಿ : ಮನೆ, ಜಮೀನು ಸೇರಿ 45.32 ಕೋಟಿ ಆಸ್ತಿ ವಶಕ್ಕೆ ಪಡೆದ ಇಡಿ

0

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅವ್ಯವಹಾರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿಗೆ ಸೇರಿದ ಬರೋಬ್ಬರಿ 45.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 38.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 7.16 ಕೋಟಿ ರೂ. ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಫಿಕ್ಸೆಡ್ ಡಿಪಾಸಿಟ್ ಗಳನ್ನು ಮುಟ್ಟುಗೋಲು ಹಾಕಲಾಗಿದೆ.

2016ರಿಂದ 2019ರ ಅವಧಿಯಲ್ಲಿ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ 1,500 ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಓಡಿ ತನಿಖೆಯನ್ನು ನಡೆಸುತ್ತಿದೆ. ಈ ನಡುವಲ್ಲೇ ಬ್ಯಾಂಕಿನ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕುಗೊಂಡಿತ್ತು.

20016 ರಿಂದ 2019ರ ವರೆಗೆ ಗ್ರಾಹಕರಿಗೆ ಸುಮಾರು ಶೇ.12 ರಿಂದ ಶೇ.16ರಷ್ಟು ಬಡ್ಡಿಯನ್ನು ನೀಡುವುದಾಗಿ ಆಸೆಯನ್ನು ತೋರಿಸಿ ಬ್ಯಾಂಕಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಬರೋಬ್ಬರು 1,500 ಕೋಟಿ ರೂಪಾಯಿ ಮೊತ್ತವನ್ನು ಸಂಗ್ರಹ ಮಾಡಿದ್ದರು. ಬಡ್ಡಿ ಆಸೆಗೆ ಬಲಿಬಿದ್ದ ಸರಕಾರಿ ನೌಕರರು, ಮಹಿಳೆಯರು, ಹಿರಿಯ ನಾಗರೀಕರು ಸೇರಿದಂತೆ ಹಲವು ಗ್ರಾಹಕರು ದೊಡ್ಡ ಮೊತ್ತದ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದ್ದರು.

ಇದೇ ಹಣವನ್ನು ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿದ್ದ ಈ ಹಿಂದೆ ಕಾರ್ಯನಿರ್ವಹಿಸಿದ್ದ ಮಾಜಿ ಅಧ್ಯಕ್ಷ ರಾಮಕೃಷ್ಣ, ಸತ್ಯನಾರಾಯಣ ಮಯ್ಯ, ಸಂತೋಷ್‌ಕುಮಾರ್ ಸೇರಿದಂತೆ ಬ್ಯಾಂಕಿನ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋಟ್ಯಾಂತರ ರೂಪಾಯಿ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆಯನ್ನು ಮಾಡಿಕೊಂಡಿದ್ದರು. ಮಾತ್ರವಲ್ಲ, ಕೆಲವು ನಿರ್ದೇಶಕರು ಅದೇ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಆಸ್ತಿ ಖರೀದಿಸಿದ್ದರಲ್ಲದೆ, ಪರಿಚಿತರು-ಸ್ನೇಹಿತರಿಗೆ ಸಾಲ ರೂಪದಲ್ಲಿ ನೀಡಿದ್ದರು.

ಅದು ಮರುಪಾವತಿಯಾಗದೇ ಬ್ಯಾಂಕು ಸಂಕಷ್ಟಕ್ಕೆ ಸಿಲುಕಿತ್ತು. ಬ್ಯಾಂಕಿನ ಕೆಲವು ಪದಾಧಿಕಾರಿಗಳು ಮೃತಪಟ್ಟಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅವ್ಯವಹಾರದಲ್ಲಿ ಭಾಗಿಯಾಗಿದ್ದವರಿಗೆ ಸೇರಿದ ಕೃಷಿ ಭೂಮಿ, ಮನೆ, ಅಪಾರ್ಟ್‌ಮೆಂಟ್ ಮತ್ತಿತರ ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ.

Leave A Reply

Your email address will not be published.