mandya : ಪುತ್ರಿಯ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ವಿಚಿತ್ರ ಘಟನೆ

ಮಂಡ್ಯ : mandya : ಬರೋಬ್ಬರಿ ನಾಲ್ಕು ದಿನಗಳ ಕಾಲ ಪುತ್ರಿಯ ಮೃತದೇಹವನ್ನು ಮನೆಯಲ್ಲಿಯೇ ಇಟ್ಟುಕೊಂಡು ತಾಯಿಯು ಅದೇ ಮನೆಯಲ್ಲಿ ವಾಸವಿದ್ದ ವಿಚಿತ್ರ ಘಟನೆಯೊಂದು ಮಂಡ್ಯ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ನಡೆದಿದೆ. ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ರೂಪಾ ಸತ್ತಿದ್ದಾಳೆ ಎಂಬ ವಿಚಾರವನ್ನು ಎಲ್ಲಿಯೂ ಹೇಳದ ತಾಯಿ ನಾಗಮ್ಮ ಮೃತದೇಹದ ಜೊತೆಯಲ್ಲಿ ಮನೆಯ ಒಳಗೇ ಇದ್ದಳು ಎನ್ನಲಾಗಿದೆ.


30 ವರ್ಷದ ರೂಪಾ 10 ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ ಕಳೆದ 5 ವರ್ಷಗಳಿಂದ ರೂಪಾ ತನ್ನ ಪತಿ ಹಾಗೂ ಮಕ್ಕಳಿಂದ ದೂರಾಗಿ ತವರು ಮನೆಯಲ್ಲಿಯೇ ವಾಸವಿದ್ದಳು ಎನ್ನಲಾಗಿದೆ. ಊರಿನಲ್ಲಿ ಹೋಮ್​ ಗಾರ್ಡ್​ ಕೆಲಸ ಮಾಡುತ್ತಿದ್ದ ರೂಪಾ ಕಳೆದ ಕೆಲವು ದಿನಗಳ ಹಿಂದೆ ಆ ಕೆಲಸವನ್ನೂ ಕಳೆದುಕೊಂಡಿದ್ದಳು. ತಾಯಿ – ಮಗಳಿಗೆ ವಿಪರೀತ ಕುಡಿಯುವ ಚಟ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಪ್ರತಿದಿನ ಒಂದಿಲ್ಲೊಂದು ವಿಚಾರಕ್ಕೆ ತಾಯಿ ಹಾಗೂ ಮಗಳ ನಡುವೆ ಜಗಳವಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ಯಾವುದೇ ಸದ್ದು ಬರುತ್ತಿರಲಿಲ್ಲ. ಅಲ್ಲದೇ ಮನೆಯಿಂದ ಯಾರೂ ಹೊರಗೆ ಕೂಡ ಬಂದಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಕ್ರಮೇಣ ನಾಗಮ್ಮ ಮನೆಯಿಂದ ಕೊಳೆತ ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಸ್ಥಳೀಯರು ಯಾವುದೋ ಪ್ರಾಣಿ ಸತ್ತಿರಬಹುದು ಎಂದೇ ಭಾವಿಸಿದ್ದಾರೆ. ಆದರೆ ನಾಗಮ್ಮ ಮನೆ ಬಾಗಿಲು ತೆರಯದೇ ಇದ್ದುದನ್ನು ಗಮನಿಸಿದ ನೆರೆ ಹೊರೆಯವರು ಮಿಕ್ಸಿ ರಿಪೇರಿ ಮಾಡುವವನ ಸಹಾಯದಿಂದ ನಾಗಮ್ಮ ಮನೆ ಬಾಗಿಲು ಒಡೆಯಿಸಿ ನೋಡಿದ್ದಾರೆ. ಈ ವೇಳೆ ರೂಪಾ ಸತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನು ಓದಿ : Hardik Patel : ಜೂನ್​ 2ರಂದು ಬಿಜೆಪಿ ಸೇರ್ಪಡೆಯಾಗಲಿರುವ ಹಾರ್ದಿಕ್​ ಪಟೇಲ್​ : ಬಿಜೆಪಿ ಅಧಿಕೃತ ಮಾಹಿತಿ

ಇದನ್ನೂ ಓದಿ : GT vs RR : ಗುಜರಾತ್ ಟೈಟಾನ್ಸ್‌ನಲ್ಲಿ ದೊಡ್ಡ ಬದಲಾವಣೆ, IPL 2022 Final ನಲ್ಲಿ ಯಾರೆಲ್ಲಾ ಆಡ್ತಾರೆ

mother spent 4 days with her daughters corpse in mandya

Comments are closed.