Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಮೂವರು ಪ್ರಮುಖ ಆರೋಪಿಗಳ ಬಂಧನ

ದಕ್ಷಿಣ ಕನ್ನಡ : Praveen Nettaru murder case : ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ದಕ್ಷಿಣ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ವಿಶೇಷ ತಂಡವು ಪ್ರಕರಣ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೃತ್ಯ ಎಸಗಿದ್ದಾರೆ ಎನ್ನಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಈ ಸಂಬಂಧ ದಕ್ಷಿಣ ಕನ್ನಡ ಪೊಲೀಸ್​ ವರಿಷ್ಠಾಧಿಕಾರಿ ಮಧ್ಯಾಹ್ನ 12:30ಕ್ಕೆ ಸಭೆ ಕರೆದು ಅಧಿಕೃತ ಮಾಹಿತಿ ನೀಡಲಿದ್ದಾರೆ. ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಎಡಿಜಿಪಿ ಅಲೋಕ್​ ಕುಮಾರ್​ ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕೊಲೆ ಪ್ರಕರಣದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ಎನ್ನಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಈ ಹಿಂದೆ ಪ್ರವೀಣ್​ ಹತ್ಯೆಯನ್ನು ಸ್ಥಳೀಯರೇ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರು, ತನಿಖೆ ವೇಳೆಯಲ್ಲಿಯೂ ಈ ವಿಚಾರ ದೃಢಪಟ್ಟಿದೆ. ಈ ಹತ್ಯೆಯನ್ನು ನಡೆಸಲು ಸುಳ್ಯದ ಕಬೀರ್​ ಎಂಬಾತ ತನ್ನ ಪರಿಚಯಸ್ಥರಿಂದ ಬೈಕ್​ ಪಡೆದು ಆರೋಪಿಗಳಿಗೆ ನೀಡಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಆಗಸ್ಟ್​ 9ರಂದು ಪೊಲೀಸರು ಕಬೀರ್​ನನ್ನು ಬಂಧಿಸಿದ್ದರು.

ಕೃತ್ಯಕ್ಕೆ ಬಳಕೆ ಮಾಡಲಾದ ಬೈಕ್​ ಕರ್ನಾಟಕದ ರಿಜಿಸ್ಟ್ರೇಷನ್​ ಹೊಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದ್ದು ಗೌಪ್ಯ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರವೀಣ್​ನನ್ನು ಹತ್ಯೆಗೈದ ಆರೋಪಿಗಳು ಕೇರಳಕ್ಕೆ ಎಸ್ಕೇಪ್​ ಆಗಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ಶಿಯಾಬ್​, ರಿಯಾಜ್​ ಹಾಗೂ ಬಶೀರ್ ಎಂದು ಗುರುತಿಸಲಾಗಿದೆ. ಈ ಮೂವರು ಬೆಳ್ಳಾರೆಯ ಆಸುಪಾಸಿನ ನಿವಾಸಿಗಳೇ ಆಗಿದ್ದಾರೆ. ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್​ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಸೂದ್​ ಜುಲೈ 21ರಂದು ಮೃತಪಟ್ಟಿದೆ. ಅಂದೇ ಆರೋಪಿಗಳು ಹಿಂದೂ ಧರ್ಮದ ಯುವಕನನ್ನು ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದರಂತೆ ಜುಲೈ 26ರ ರಾತ್ರಿ 8:30ರ ಸುಮಾರಿಗೆ ಪ್ರವೀಣ್​ನನ್ನು ಹತ್ಯೆಗೈದಿದ್ದಾರೆ.

ಈ ಕೊಲೆಯನ್ನು ನಡೆಸಲು ಆರೋಪಿಗಳು ಒಂದು ವಾರಗಳ ಕಾಲ ತಯಾರಿ ನನಡೆಸಿದ್ದರು. ಸಂಘ ಪರಿವಾರದ ಯುವಕನನ್ನೇ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎನ್ನುವುದು ಹಂತಕರ ಸ್ಕೆಚ್​ ಆಗಿತ್ತು. ಈ ಸಂದರ್ಭದಲ್ಲಿ ಕೋಳಿ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಹಂತಕರ ಕಣ್ಣಿಗೆ ಬಿದ್ದಿದ್ದರು. ಹೀಗಾಗಿ ಪ್ರವೀಣ್​ ಮೇಲೆ ಗುರಿಯಿಟ್ಟಿದ್ದ ಹಂಕತರು ಆತನ ಮೇಲೆ ತಲವಾರ್​ನಿಂದ ದಾಳಿ ನಡೆಸಿದ ಕೊಲೆಗೈದಿದ್ದರು.

ಇನ್ನು ಈ ಕೃತ್ಯವನ್ನು ನಡೆಸಲು ಹಳೆಯ ಸ್ಪ್ಲೆಂಡರ್ ಬೈಕ್​ ಬಳಕೆ ಮಾಡಲಾಗಿತ್ತು. ಹಂತಕರಿಗೆ ಬಂಧಿತ ಆರೋಪಿ ಕಬೀರ್​ ಪರಿಚಯಸ್ಥರೊಬ್ಬರ ನಂಬರ್​ ಪ್ಲೇಟ್​ ಅಸ್ಪಷ್ಟವಾಗಿದ್ದ ಬೈಕ್​ನ್ನು ತೆಗೆದುಕೊಂಡು ನೀಡಿದ್ದ. ಪ್ರವೀಣ್​ನನ್ನು ಹತ್ಯೆಗೈದ ಬಳಿಕ ಆರೋಪಿಗಳು ಕೇರಳಕ್ಕೆ ಎಸ್ಕೇಪ್​ ಆಗಿದ್ದರು. ಮೊದಲು ಕೇರಳದ ತಲಶೇರಿ ಬಳಿಕ ಕಣ್ಣೂರು, ಅದಾದ ನಂತರ ಮಲಪುರಂ ಹೀಗೆ ಹದಿನೈದು ದಿನಗಳಲ್ಲಿ ಏಳು ಕಡೆಗಳಲ್ಲಿ ಅಡಗಿಕೊಂಡಿದ್ದರು. ಹಂತಕರ ಪತ್ತೆಗೆ ಬಲೆ ಬೀಸಿದ್ದ ಎಡಿಜಿಪಿ ಅಲೋಕ್​ ಕುಮಾರ್​, ಮೊದಲು ಹಂತಕರ ಆಪ್ತರನ್ನು ಖೆಡ್ಡಾಗೆ ಕೆಡವಿದ್ದರು. ಹಂತಕರಿಗೆ ಪರೋಕ್ಷ ಹಾಗೂ ಪ್ರತ್ಯಕ್ಷ ಸಾಥ್​ ನೀಡಿದವರ ಆಸ್ತಿ ಮುಟ್ಟುಗೋಲಿನ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ಹದಿನೈದು ದಿನಗಳ ಅಂತರದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಸಾಕಷ್ಟು ನಡುಕ ಹುಟ್ಟಿಸಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : Shilpa Shetty broke her leg: ಶೂಟಿಂಗ್ ವೇಳೆ ಅವಘಡ: ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

ಇದನ್ನೂ ಓದಿ : Green expressway highway : ಬೆಂಗಳೂರಿನಿಂದ ಚೆನ್ನೈಗೆ ಇನ್ನು ಕೇವಲ 2 ಗಂಟೆ ಪ್ರಯಾಣ

Praveen Nettaru murder case : Main accused arrested

Comments are closed.