ಚಲಿಸುವ ಕಾರಿನಲ್ಲಿ ಐಟಿ ಮ್ಯಾನೇಜರ್ ಮೇಲೆ ಗ್ಯಾಂಗ್ ರೇಪ್; ಕಂಪನಿ ಸಿಇಒ ಅರೆಸ್ಟ್

ಉದಯಪುರ: ರಾಜಸ್ಥಾನದ ಉದಯಪುರ ನಗರದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಖಾಸಗಿ ಐಟಿ ಕಂಪನಿಯೊಂದರ ಮಹಿಳಾ ಮ್ಯಾನೇಜರ್ ಮೇಲೆ ಅದೇ ಕಂಪನಿಯ ಸಿಇಒ ಮತ್ತು ಮಹಿಳಾ ಎಕ್ಸಿಕ್ಯೂಟಿವ್ ಹೆಡ್ ಸೇರಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಂಪನಿಯ ಸಿಇಒ ಜಿತೇಶ್ ಸಿಸೋಡಿಯಾ, ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ ಮತ್ತು ಆಕೆಯ ಪತಿ ಗೌರವ್ ಸಿರೋಹಿ ಎಂದು ಗುರುತಿಸಲಾಗಿದೆ.

ಈ ಪೈಶಾಚಿಕ ಕೃತ್ಯವು ಕಳೆದ ವಾರ ಜಿತೇಶ್ ಸಿಸೋಡಿಯಾ ಅವರ ಜನ್ಮದಿನದ ಪಾರ್ಟಿಯ ನಂತರ ನಡೆದಿದೆ. ನಗರದ ಹೋಟೆಲ್‌ವೊಂದರಲ್ಲಿ ಆಯೋಜಿಸಲಾಗಿದ್ದ ಪಾರ್ಟಿ ಮುಗಿದ ಬಳಿಕ, ಸಂತ್ರಸ್ತೆಯನ್ನು ಮನೆಗೆ ಬಿಡುವುದಾಗಿ ನಂಬಿಸಿದ ಆರೋಪಿಗಳು ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ದಾರಿಯಲ್ಲಿ ಆಕೆಗೆ ಬಲವಂತವಾಗಿ ನಶೆ ಬರಿಸುವ ಪದಾರ್ಥವಿರುವ ಸಿಗರೇಟ್ ನೀಡಲಾಗಿದ್ದು, ಆಕೆ ಪ್ರಜ್ಞೆ ಕಳೆದುಕೊಂಡ ನಂತರ ಚಲಿಸುವ ಕಾರಿನಲ್ಲೇ ಈ ಭೀಕರ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿಬೀಳಲು ಕಾರಿನಲ್ಲಿದ್ದ ಡ್ಯಾಶ್‌ಕ್ಯಾಮ್ (Dashcam) ಪ್ರಮುಖ ಸಾಕ್ಷಿಯಾಗಿದೆ. ದೌರ್ಜನ್ಯದ ನಂತರ ಪ್ರಜ್ಞೆ ಬಂದಾಗ ಸಂತ್ರಸ್ತೆಗೆ ತನಗೆ ಅನ್ಯಾಯವಾಗಿರುವ ಅನುಮಾನ ಬಂದಿದೆ. ತಕ್ಷಣವೇ ಚಾಣಾಕ್ಷತನ ಮೆರೆದ ಆಕೆ ಕಾರಿನಲ್ಲಿದ್ದ ಡ್ಯಾಶ್‌ಕ್ಯಾಮ್ ದೃಶ್ಯಗಳನ್ನು ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕೃತ್ಯದ ಅಸಲಿ ಮುಖವಾಡ ಬಯಲಾಗಿದೆ. ಈ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಆಕೆ ಸುಖೇರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ವಿಷ್ಣು ಪ್ರತಿಮೆ ಧ್ವಂಸ: ಥೈಲ್ಯಾಂಡ್ ವಿರುದ್ಧ ಸಿಡಿದೆದ್ದ ಭಾರತೀಯರು, ‘ಬಾಯ್ಕಾಟ್ ಥೈಲ್ಯಾಂಡ್’ ಅಭಿಯಾನಕ್ಕೆ ಕರೆ

ದೂರು ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಉದಯಪುರ ಪೊಲೀಸರು ಡ್ಯಾಶ್‌ಕ್ಯಾಮ್ ಮತ್ತು ಸಿಆರ್‌ಪಿಎಫ್ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ದೌರ್ಜನ್ಯ ನಡೆದಿರುವುದು ದೃಢಪಟ್ಟಿದ್ದು, ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕಾರ್ಪೊರೇಟ್ ವಲಯದಲ್ಲಿ ಉನ್ನತ ಹುದ್ದೆಯಲ್ಲಿರುವವರೇ ಇಂತಹ ಹೀನ ಕೃತ್ಯದಲ್ಲಿ ತೊಡಗಿರುವುದು ಇಡೀ ದೇಶದ ಗಮನ ಸೆಳೆದಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories