ಬೆಳ್ಳಂಬೆಳಗ್ಗೆಯೇ ಅಗ್ನಿ ಅವಘಡ : ಸುಟ್ಟು ಕರಕಲಾಯ್ತು ಎರಡು ಅಂಗಡಿ

ವಿಟ್ಲ : ಬೆಳ್ಳಂಬೆಳಗ್ಗೆಯೇ ಸಂಭವಿಸಿದ ಅಗ್ನಿಅವಘಡದಲ್ಲಿ ಎರಡು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆ.ಜೆ.ಟವರ್ಸ್ ನಲ್ಲಿರುವ ಎಂ.ಪಿ. ಹಾರ್ಡ್ ವೇರ್ ಮತ್ತು ಪೈಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಆರಂಭದಲ್ಲಿ ಪೈಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಪಕ್ಕದಲ್ಲಿದ್ದ ಬೇಕರಿಗೂ ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಎರಡೂ ಅಂಗಡಿಗಳು ಸುಟ್ಟು ಹೋಗಿವೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಬೆಂಕಿ ನಂದಿಸುವುದಕ್ಕೆ ಮುಂದಾಗಿದ್ದರು. ಆದರೆ ಅಂಗಡಿಯ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಅದ್ರಲ್ಲೂ ಪೈಂಟ್ಸ್ ಗೆ ಬೆಂಕಿ ತಗುಲಿದ್ದರಿಂದ ಬೆಂಕಿನ ಜ್ವಾಲೆ ಹೆಚ್ಚಾಗುತ್ತಲೇ ಹೋಗಿತ್ತು.


ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದು, ಅಕ್ಕಪಕ್ಕದ ಇನ್ನಷ್ಟು ಅಂಗಡಿಗಳಿಗೆ ವ್ಯಾಪಿಸದಂತೆ ನೋಡಿಕೊಂಡ್ರು. ಸ್ಥಳಕ್ಕೆ ವಿಟ್ಲ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

Comments are closed.