Shivamogga violence: ಶಿವಮೊಗ್ಗ ಮತ್ತೆ ಧಗಧಗ: ಜಿಲ್ಲೆಯ 3 ಕಡೆಗಳಲ್ಲಿ ನಿನ್ನೆ ತಡರಾತ್ರಿ ನಡೆದಿದ್ದೇನು..?

ಶಿವಮೊಗ್ಗ: Shivamogga violence: ಕಳೆದ 8 ತಿಂಗಳ ಹಿಂದೆ ಹರ್ಷನ ಕೊಲೆಯಿಂದ ಹೊತ್ತಿ ಉರಿದಿದ್ದ ಶಿವಮೊಗ್ಗದಲ್ಲಿ ಇದೀಗ ಮತ್ತೆ ದುಷ್ಕರ್ಮಿಗಳು ಅಟ್ಟಹಾಸಗೈದಿದ್ದಾರೆ. ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ನಿನ್ನೆ ರಾತ್ರಿ 11.30ರ ವೇಳೆಗೆ ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಇಲ್ಲಿನ ನಿವಾಸಿ ಪ್ರಕಾಶ್ (25) ಎಂಬಾತನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ. ಪ್ರಕಾಶ್ ತಲೆಗೆ ಗಂಭೀರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೈಕ್‍ನಲ್ಲಿ ಬಂದಿದ್ದ ಮೂವರಿಂದ ಈ ದುಷ್ಕøತ್ಯ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯುತ್ತಿದ್ದಾರೆ. ‘3 ಬೈಕ್‍ಗಳಲ್ಲಿ ಬಂದ 9 ಮಂದಿ ಕಲ್ಲು,ಇಟ್ಟಿಗೆಯಿಂದ ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರು ಆರ್‍ಎಸ್‍ಎಸ್, ಭಜರಂಗದಳಕ್ಕೆ ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದರು. ಎಲ್ಲರೂ ಬಟ್ಟೆಯಿಂದ ತಮ್ಮ ಮುಖವನ್ನು ಮರೆಮಾಚಿಕೊಂಡಿದ್ದರು. ಹಲ್ಲೆ ನಡೆಸಿ ಪರಾರಿಯಾದ ಬಳಿಕ ಪ್ರಕಾಶ್‍ನನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಆತನ ಸೋದರ ಸಂಬಂಧಿ ಕೃಷ್ಣಪ್ಪ ಹೇಳಿಕೆ ನೀಡಿದ್ದಾರೆ. ಇನ್ನು ಕೆಲ ತಿಂಗಳ ಹಿಂದೆ ಕೊಲೆಗೀಡಾಗಿದ್ದ ಹರ್ಷನ ಸಹೋದರಿ ಅಶ್ವಿನಿ ಕೂಡಾ ಈ ಘಟನೆಯ ಪ್ರತ್ಯಕ್ಷದರ್ಶಿ ಆಗಿದ್ದು ಅವರ ಹೇಳಿಕೆಯನ್ನೂ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹಲ್ಲೆಗೊಳಗಾದ ಪ್ರಕಾಶ್ ಮೊದಲ ಪ್ರತಿಕ್ರಿಯೆ:
ನಿನ್ನೆ ರಾತ್ರಿ ಗೆಳೆಯನ ಮನೆಯಿಂದ ನನ್ನ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಬಂದ ಕಿಡಿಗೇಡಿಗಳು ಹಿಂದಿನಿಂದ ಬಂದು ಕಲ್ಲಿನಿಂದ ಹೊಡೆದರು. ಅವರು ಆರ್‍ಎಸ್‍ಎಸ್ ವಿರುದ್ಧ ಅವಾಚ್ಯವಾಗಿ ಬೈಯ್ಯುತ್ತಿದ್ದರು. ಕಲ್ಲಿನಿಂದ ಹೊಡೆದಾಗ ನೆಲಕ್ಕೆ ಬಿದ್ದ ಮೇಲೆಯೂ ಮೂರ್ನಾಲ್ಕು ಮಂದಿ ಕಾಲಿನಿಂದ ತುಳಿದು ಹಲ್ಲೆಗೈದರು. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದೆ. ಮನೆಯವರು ಆಸ್ಪತ್ರೆಗೆ ಸೇರಿಸಿದರು ಎಂದು ಹೇಳಿದರು.

ಹರ್ಷನ ಮನೆ ಮುಂದೆಯೂ ಅಬ್ಬರ:
ಕೆಲ ತಿಂಗಳ ಹಿಂದೆ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷನ ಮನೆ ಮುಂದೆಯೂ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕೆಲ ದುಷ್ಕರ್ಮಿಗಳು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಬೈಕ್‍ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳ ತಂಡ ಹರ್ಷನ ಮನೆ ಎದುರು ಕಿರುಚಾಡಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ್ನು ಕಾಲಿನಲ್ಲಿ ಒದ್ದು, ಬೀಳಿಸಿದ್ದಾರೆ. ಮಾತ್ರವಲ್ಲದೇ ಹರ್ಷನನ್ನು ತೆಗೆದಿದ್ದು ಸಾಕಾಗಿಲ್ವ..? ನಿಮ್ಮನ್ನೂ ತೆಗೆಯಬೇಕಾ..? ನಿಮ್ಮನ್ನು ಬಿಡುವುದಿಲ್ಲ ಎಂದು ಕಿರುಚಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹರ್ಷನ ಸಹೋದರಿ ಅಶ್ವಿನಿ ಹೇಳಿದ್ದೇನು..?
ಹರ್ಷನ ಕೊಲೆಗೈದವರು ಜೈಲಿನಲ್ಲಿ ಆರಾಮದಿಂದ ದಿನ ಕಳೆಯುತ್ತಿದ್ದಾರೆ. ಹರ್ಷನ ಕೊಲೆ ಬಳಿಕವೂ ಜಿಲ್ಲೆಯಲ್ಲಿ ಇಂಥದ್ದೇ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹೀಗಾಗಿ ನಮಗೆ ಇಲ್ಲಿ ಇರಲು ಭಯವಾಗುತ್ತಿದ್ದು, ಯಾರಲ್ಲಿ ರಕ್ಷಣೆ ನೀಡುವಂತೆ ಕೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಶೀಘ್ರ ಕ್ರಮ ಕೈಗೊಳ್ಳುವಂತೆ ಈಶ್ವರಪ್ಪ ಆಗ್ರಹ:

ಘಟನೆ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನಿನ್ನೆಯ ದಾಳಿಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಲ್ಲ, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಪಿಎಫ್‍ಐ ಕೈವಾಡ ಇದೆಯೋ ಅಥವಾ ಬೇರೆ ಗೂಂಡಾಗಳು ಕೃತ್ಯ ಎಸಗಿದ್ದಾರೆಯೋ ಅನ್ನೋದನ್ನು ಪೊಲೀಸರು ಪತ್ತೆ ಹಚ್ಚಬೇಕು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗವನ್ನು ಹಾಳು ಮಾಡಲೆಂದೇ ಮುಸ್ಲಿಮರು ಇಂಥ ಕೆಲಸ ಮಾಡುತ್ತಿದಾರೆ. ಇಂಥ ಘಟನೆಗಳು ನಡೆದಾಗ ಬೇರೆ ಪಕ್ಷದವರು ಬಾಯಿ ಬಿಡೋದೇ ಇಲ್ಲ. ನಮ್ಮ ಜೊತೆ ಕಾಂಗ್ರೆಸ್ ಇದೆ ಅನ್ನೋ ಮನೋಭಾವನೆ ಮುಸ್ಲಿಂ ಗೂಂಡಾಗಳಿಗಿದೆ ಎಂದು ಹೇಳಿದ್ದಾರೆ,

ರಾತ್ರಿ 3 ಗಂಟೆಗೂ ನಡೆದಿತ್ತು ಕೊಲೆ:
ಶಿವಮೊಗ್ಗ ನಗರದ ವೆಂಕಟೇಶ್ ನಗರದ ನಡುರಸ್ತೆಯಲ್ಲೇ ನಿನ್ನೆ ರಾತ್ರಿ ಸುಮಾರು 3 ಗಂಟೆ ವೇಳೆಗೆ ವಿಜಯ್(37) ಎಂಬಾತನ ಕೊಲೆ ನಡೆದಿತ್ತು. ಯಾರದ್ದೋ ಕರೆ ಬಂದು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಬಂದಿದ್ದ ವಿಜಯ್‍ನನ್ನು ಕೊಲೆಗೈಯ್ಯಲಾಗಿದೆ. ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: 3 minors kill:ಪಟಾಕಿ ಸಿಡಿಸದಂತೆ ಬುದ್ಧಿ ಹೇಳಿದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಮೂವರು ಅಪ್ರಾಪ್ತರು:ಸಿಸಿ ಕ್ಯಾಮರದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ: WhatsApp outage triggers meme:ವಾಟ್ಸಾಪ್​ ಸೇವೆ ಡೌನ್​ : ಟ್ವಿಟರ್​ನಲ್ಲಿ ಹರಿದಾಡಿದ ತರಹೇವಾರಿ ಮೀಮ್​ಗಳು, ವಾಟ್ಸಾಪ್​​ ಕಾಲೆಳೆದ ನೆಟ್ಟಿಗರು

what are the three crimes that took place last night in shivamogga

Comments are closed.