ಹೂವಿನ ಗಿಡದ ಮೇಲೆ ಹಾವು; ಮಹಿಳೆ ಸಾವು!

ಅಂಕೋಲಾ: ತೋಟದ ಹೂವಿನ ಗಿಡಗಳ ನಡುವೆ ಅಡಗಿದ್ದ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ, ಯಶೋಧಾ ವೈದ್ಯ (39) ಎಂಬ ಮಹಿಳೆ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿಯ ಕಂಡ್ರಮನೆಯಲ್ಲಿ ಡಿಸೆಂಬರ್ 15ರಂದು ನಡೆದಿದೆ.
ಕೃಷಿ ಕುಟುಂಬದವರಾದ ಯಶೋಧಾ ವೈದ್ಯ ಅವರು ಹೂವಿನ ಗಿಡಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಡಿಸೆಂಬರ್ 15ರಂದು ಅವರು ತಮ್ಮ ಪತಿ ಶೇಖರ ವೈದ್ಯ ಅವರೊಂದಿಗೆ ತೋಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ, ಗಿಡವೊಂದರ ಬುಡದಲ್ಲಿ ಅಡಗಿದ್ದ ವಿಷಜಂತು ಆ ದಂಪತಿಯ ಕಣ್ಣಿಗೆ ಕಾಣಿಸಲಿಲ್ಲ.
ಯಶೋಧಾ ವೈದ್ಯ ಅವರ ಎಡಗಾಲಿನ ಪಾದಕ್ಕೆ ಹಾವು ಕಚ್ಚಿದ್ದು, ಕೂಡಲೇ ಪಾದವು ಊದಿಕೊಂಡು ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ರಾಮನಗುಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಅವರನ್ನು ಯಲ್ಲಾಪುರದ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯದಲ್ಲಿಯೇ ಯಶೋಧಾ ವೈದ್ಯ ಅವರು ಉಸಿರಾಟ ನಿಲ್ಲಿಸಿದ್ದಾರೆ. ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಅವರ ಸಾವನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬ್ರಹ್ಮಗಂಟು ನಟಿಗೆ ಮದುವೆ



