ಮನೆಯಲ್ಲೇ ಮಾಡಬಹುದು ಕೊರಗಜ್ಜನ ಹರಕೆ ಹಾಗೂ ಸೇವೆ!

ಇತ್ತೀಚಿಗೆ ಕಾಂತಾರ ಸುದ್ದಿಯಲ್ಲಿರುವಾಗಿನಿಂದ ದೈವಗಳ ಆರಾಧನೆ ನಾಡಿನಾದ್ಯಂತ ಶುರುವಾಗಿದೆ. ಅಣಕವೂ ನಡಿದಿದೆ, ಆರಾಧನೆಯೂ ನಡೆದಿದೆ ಈ ನಡುವೆ ಅಪಸವ್ಯವೂ ಸಾಕಷ್ಟೂ ಆಗಿಬಿಟ್ಟಿದೆ. ಇನ್ನೂ ಕೆಲವರು ಕಾಡ ಕತ್ತಲಲ್ಲಿ ಕಣ್ಣು ಕಟ್ಟಿ ಬಿಟ್ಟಿರುವವಂತವರು, ಕಂಡ ಕಂಡ ದೇವರಿಗೂ ಕೈ ಮುಗಿಯುವಷ್ಟು ಪರಿಸ್ಥಿತಿ ಹೀನಾಯವಿದ್ದರು ಇಂತಹವರನ್ನೇ ಕೇಂದ್ರವಾಗಿಸಿಕೊಂಡು ದೈವಗಳ ವ್ಯಾಪಾರವೂ ಅವ್ಯಾಹತವಾಗಿ ಕೆಲ ಡಾಂಭಿಕರಿಂದ ನಡೆದಿದೆ.

ನೀವು ತಿಳಿಯಲೇಬೇಕು ಈ ವಿಷಯಗಳನ್ನು

ಆದರೆ ತಿಳಿಯಬೇಕಾದ ವಿಷಯ ಹಲವಿದ್ದಾವೆ. ಅದರಲ್ಲೂ ದೈವಗಳ ಬಗ್ಗೆ ಅಲಿಖಿತ ಷರಾ ಇದ್ದ ಹಾಗೆ ಕೆಲವೊಂದು ಕಟ್ಟುಪಾಡುಗಳಿವೆ. ಅದನ್ನೆಲ್ಲಾ ಗಾಳಿಗೆ ತೂರಿ ಮೈಸೂರು,‌ಹಾವೇರಿ,ಕೊಡಗು, ಚಿಕ್ಕಮಗಳೂರು,ಶಿವಮೊಗ್ಗದಲ್ಲಿ ಕೊರಗಜ್ಜನಿಗೆ ಆಲಯ ಕಟ್ಟಿದವರಿದ್ದಾರೆ! ಇನ್ನೇನು ಪಂಜಂದಾಯ ದೈವ ಕೊರಗಜ್ಜನಿಗೆ ನೀಡಿದ ಬೈಲಡ್ ಆಟೀಲ್, ಕಾಡಿಡ್ ಮೆಚ್ಚಿ, ಏಳ್ ಸಾನ, ತೂ ತುಡರ್ ಉಪ್ಪುಂದ ಸೇವೆ (ಊರಿನಲ್ಲಿ ಅಡುಗೆ ಮಾಡಿಸಿ ಕಾಡಿನಲ್ಲಿ ಊಟ ಎಂದರೆ ನೈವೇದ್ಯ ಸ್ವೀಕರಿಸು, ಏಳು ಮೂಲಸ್ಥಾನದಲ್ಲಿ ನೆಲೆಸು, ಬೆಂಕಿ-ಬೆಳಕು ಇಲ್ಲದ ಕತ್ತಲಲ್ಲಿ ನಿಂತು ಸೇವೆ ಸ್ವೀಕರಿಸಿ ಭಕ್ತಾದಿಗಳನ್ನು ಹರಸು) ಎಂಬ ವಾಗ್ದಾನ ಹಳ್ಳ ಹಿಡಿಯುತ್ತಿದೆ.

ಅಜ್ಜನಿಗೆ ಬೆಳಕಲ್ಲಿ ಮಾಡುವ ಯಾವ ಸೇವೆಯೂ ಇಲ್ಲ!

ಹೀಗಿದ್ದರೆ ಅಜ್ಜ ಒಲಿಯುತ್ತಾನಾ? ಇನ್ನು ಮೇಲೆ ಕೊರಗಜ್ಜನಿಗೆ ಲಕ್ಷ ದೀಪ ಆಗುವುದೊಂದು ಬಾಕಿ! ಆದರೆ ಅಜ್ಜ ಯಾನೆ ತನಿಯ 16 ವರ್ಷದಲ್ಲಿ ಕಡು ಕಷ್ಟ ಕಂಡು ಜ್ಞಾನವೃದ್ಧನಾಗಿ ತುಳುನಾಡಲ್ಲಿ ಎಲ್ಲರಿಗಿಂತ ಹಿರಿತನದ ಹಾಗೂ ಕಾರ್ನಿಕದ ಸ್ಥಾನ ಪಡೆದವ. ಯಾವ ಕತ್ತಲು ಅಂಧಕಾರವಲ್ಲವೋ ಆ ಕತ್ತಲು ಅವನು, ಆ ಕತ್ತಲಿನೊಳಗೊಂದು ರೂಪವಿದೆ ಆ ರೂಪ ನಮ್ಮ ಆತ್ಮಾವಲೋಕನ, ಮುಂದಿನ ಜೀವನದ ಸಾಧನೆ-ಭಾದನೆಗೆ ಆಲೋಚಿಸಲು ನಮ್ಮಲ್ಲೇ ಒಂದು ಅವಕಾಶ ಕೊಡುತ್ತದೆ. ಬ್ಲ್ಯಾಕ್ ಹೋಲ್ ರೂಪದಲ್ಲಿ ಇರುವ ಕತ್ತಲಿಗೆ ಹೇಗೆ ಎಲ್ಲವನ್ನೂ ಹೀರುವ ಗುಣವಿದೆಯೋ ಕೊರಗಜ್ಜನ ಸಾನಿಧ್ಯದ ಕತ್ತಲಿಗೂ ನಮ್ಮ ಕೆಟ್ಟದ್ದನ್ನು-ಒಳ್ಳೆಯದನ್ನು ಎಲ್ಲವನ್ನೂ ಹೀರಿ ಯಾವತ್ ಜನ್ಮ ನಾವು ಹೇಗೆ ಶಿಶುವಾಗಿ ಬಂದಿದ್ದೇವೋ ಆ ಸಮಯದಲ್ಲಿ ನಮಗಿದ್ದ ನಿರ್ಲಿಪ್ತತೆಯನ್ನು, ನಿರ್ಗುಣವನ್ನೂ ಕೊಟ್ಟು ಮೈ-ಮನಸಿನ ಸಂಪೂರ್ಣ ಜಡ ತೊಳೆದು ಹಾಕಿ ಮುಂಬರುವ ಜೀವನಕ್ಕೆ ಬೆನ್ನು ತಟ್ಟಿ ಕಳಿಸುತ್ತದೆ. ಆ ಶಕ್ತಿಯೇ ಕೊರಗಜ್ಜ, ಕೊರಗತನಿಯ.

ಅಜ್ಜ ಒಲಿಯಲು ಆಡಂಬರ ಬೇಕಿಲ್ಲ, ಡಾಂಭಿಕತೆ ಸಲ್ಲ!

ಇಂತಹ ಕೊರಗಜ್ಜನಿಗೆ ದೊಡ್ಡ ಸೇವೆಯನ್ನೇ ಕೊಡಬೇಕೆ, ಸೀರಿಯಲ್ ಲೈಟುಗಳ ನೇಮ, ಕೋಲದಲ್ಲಷ್ಟೇ ಅವನು ಒಲಿಯುತ್ತಾನೆಯೇ? ಅವನು ಒಲಿಯಬೇಕಾದರೆ ನಾವು ಬಂಡಿ ಬಂಡಿ ಆಹಾರ ಕೊಡಬೇಕೆ? ಮಂಗಳೂರಿಗೆ ಹೋಗಬೇಕೆ?‌ ಕುಂಕುಮಾರ್ಚನೆ, ಮಂಗಳಾರತಿ ಸೇವೆ ಇವನಿಗಿದೆಯೇ? ಎಂಬೆಲ್ಲಾ ಪ್ರಶ್ನೆ ಸಹಜ ಮುಗ್ಧ ಭಕ್ತಿ ಹೊಂದಿ ಕಷ್ಟ ಪಡುತ್ತಿರುವ ಅಸಹಾಯಕ ಬಂಧುಮಿತ್ರರಲ್ಲಿ ಇರುವುದನ್ನು ಕಂಡಿದ್ದೇವೆ. ಅದಕ್ಕೆ ಸರಳ ಪರಿಹಾರವಾಗಿ ಈ ಲೇಖನ.

ಕುಂದಾಪುರದಲ್ಲಿ ನೀಚ, ತುಳುನಾಡಿನಾದ್ಯಂತ ಕೊರಗಜ್ಜ

ಉತ್ತರ ತುಳುನಾಡಿನಲ್ಲಿ ನೀಚ ಎಂದು ತುಳುನಾಡಿನಾದ್ಯಂತ ತನಿಯ, ಕೊರಗತನಿಯ, ಕೊರಗಜ್ಜ ಎಂದೇ ಪ್ರಖ್ಯಾತನಾಗಿರುವ ಈ ಕಾರ್ನಿಕ ದೈವ ಶಿವನ ಅವತಾರ ಎಂದೆಲ್ಲಾ ಹೇಳುತ್ತಾರೆ. ಆದರೆ ಆತ ಪಡಬಾರದ ಕಷ್ಟ ಪಟ್ಟು ಧರ್ಮ ಮಾರ್ಗದಿಂದ ಜೀವ ನಡೆಸಿ ಕಾಯ ಬಿಟ್ಟು ಮಾಯಕ್ಕೆ ಸಂದಿದ ದಿವ್ಯ ಮಾನವ. ಆತ ನಮ್ಮ ನಡುವೆ ಇದ್ದೇ ಮರೆಯಾದ ನಾವು ನೋಡಿ ಕಲಿಯಬಹುದಾದ, ಅನುಸರಿಸಬೇಕಾದ ವ್ಯಕ್ತಿತ್ವ. 16 ವರ್ಷ ಪ್ರಾಯದಲ್ಲಿ ಮಾಯವಾದ ಕೊರಗಜ್ಜನಿಗೆ ನಿಮ್ಮ ಮನೆಯಲ್ಲೇ ಪೂಜಿಸಿ ಬಹುದು ಅದು ಹೇಗೆ ತಿಳಿಯೋಣ ಬನ್ನಿ.

ಇವೆಲ್ಲಾ ಅಜ್ಜನ ಪ್ರಿಯ ವಸ್ತುಗಳು

ಅನಾದಿ ಕಾಲದಿಂದಲೂ ಕೊರಗಜ್ಜನಿಗೆ ಮೀಸಲು, ಅಗೇಲು ಎಂಬ ಆಚರಣೆ ಜಾರಿಯಲ್ಲಿದೆ‌. ಕಷ್ಟದಲ್ಲಿದ್ದವರು (ನ್ಯಾಯಯುತವಾಗಿದ್ದರೆ ಮಾತ್ರ) ‘ಸ್ವಾಮಿಯೇ ಕೊರಗಜ್ಜ ಕಾಪುಲೇ’ ಅಥವಾ ಸ್ವಾಮಿ‌ ಕೊರಗಜ್ಜ ಕಾಪಾಡು ಎಂದರೂ ಆತ ಒಲಿದು ಬಿಡುತ್ತಾನೆ. ಅಜ್ಜನಿಗೆ ತಂಬಾಕಿಲ್ಲದ ಬೀಡಾ, ಸೇಂದಿ, ಬಾಂಗುಡೆ ಮೀನು, ಬಸಳೆ ಸೊಪ್ಪಿನ ಸಾರು, ಕುಚ್ಚಲಕ್ಕಿ ಅನ್ನ ತುಂಬಾ ಇಷ್ಟ ನಿಮ್ಮ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಅಜ್ಜ ನೀನು ನನ್ನ ಈ ಕೆಲಸ ಮಾಡಿಕೊಟ್ಟರೆ ನಾ ನಿನಗೆ ಎಲೆ ಅಡಿಕೆ/ ಸೇಂದಿ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಳ್ಳಬಹುದು. ಈ ಹರಕೆಯನ್ನು ನೀವು ಮನೆಯಲ್ಲೇ ಅರ್ಪಿಸಬಹುದು!

ಮನೆ ಹೊರಗೆ ಇದೆಲ್ಲ ತಯಾರಿ ಮಾಡಿಕೊಳ್ಳಿ

ಮನೆಯ ಹೊರಗೆ ಕತ್ತಲಲ್ಲಿ ಬೆಳಕು ಬೀಳದ ಸ್ಥಾನವಿದ್ದರೆ ಒಂದು ನಿಗದಿತ ಜಾಗ ಭದ್ರ ಪಡಿಸಿಕೊಳ್ಳಿ. ಅಲ್ಲಿ ಬಂದು ಒಂದೇ ಒಂದು ಕೋಲುಬತ್ತಿ ಇಟ್ಟುಕೊಂಡು ಅಲ್ಲಿ ಜಾಗ ಶುದ್ಧಿ ಮಾಡಿಕೊಳ್ಳಿ ನಂತರ ಮನೆ ಮಂದಿ ಅಥವಾ ನೀವೊಬ್ಬರೆ ನಿಂತುಕೊಂಡು ಅಜ್ಜನಿಗೆ ಇಷ್ಟವಾಗಿರುವ ಕೋಳಿ ಪಲ್ಯ, ಹುರುಳಿ ಸಾರು, ಬಸಳೆ ಸೊಪ್ಪಿನ ಪಲ್ಯ ಅಥವಾ ಸಾಂಬಾರ್, ಅನ್ನ, ಮೀನಿನ ಪದಾರ್ಥ, ಬೇಯಿಸಿದ ಮೊಟ್ಟೆ, ನಿಂಬೆ ಹಣ್ಣಿನ ಉಪ್ಪಿನಕಾಯಿ, ಸೇಂದಿ ಇಷ್ಟು ಇಟ್ಟು “ಅಜ್ಜಾ ಕಾಪುಲೆ ನಮನ್ ಈರೇಗ್ ಬಾಜಿಲ್ ಕೊರ್ಪೆ” ಎಂದು ಹೇಳಿ ಅಥವಾ ನಿಮ್ಮ ಭಾಷೆಯಲ್ಲೇ ನಿಮ್ಮ ಕಷ್ಟ ನಿವೇದನೆ ಮಾಡಿಕೊಂಡು ಒಂದು ಹತ್ತು ನಿಮಿಷ ಆ ಎಡೆ ಮುಂದೆ ನಿಲ್ಲಿ. ನೀವು ಸಸ್ಯಾಹಾರಿಗಳಾಗಿದ್ದರೆ ಎಲೆ, ಅಡಿಕೆ, ಚಕ್ಕುಲಿ, ನಿಂಬೆಹಣ್ಣಿನ ಉಪ್ಪಿನಕಾಯಿ, ಅನ್ನ, ಬಸಳೆಸೊಪ್ಪಿನ ಸಾರು ಇಷ್ಟು ಹಾಕಿ ಇಟ್ಟರೂ ಸಾಕು.

ನೆನಪಿರಲಿ, ಅಜ್ಜನಿಗೆ ಮೂರ್ತಿ, ಮುಖವಾಡ ಇಲ್ಲ! ಇದಷ್ಟೇ ಅಜ್ಜನ ಮೂಲಸ್ಥಾನ

ನಂತರ ಅದನ್ನು ಮನೆ ಮಂದಿ ಅಥವಾ ನೀವೆ ಸೇರಿಸಿ ಮನೆಯ ಒಳಗೆ ಹೋಗಿ. ಕೊರಗಜ್ಜನಿಗೆ ಮುಖವೂ ಇಲ್ಲ ಮುಖವಾಡವೂ ಇಲ್ಲ, ಮೂರ್ತಿಯೂ ಇಲ್ಲ. ಆತ ಹೇಗಿದ್ದ ಅನ್ನೋ ಕಲ್ಪನೆ ನಿಮ್ಮಲ್ಲೇ ಒಡಮೂಡಬೇಕು ಅದೇ ಸರಿಯಾದ ಕ್ರಮ. ಅಲ್ಲದೇ ಇದಿಷ್ಟು ಬಿಟ್ಟು ಯಾವುದೇ ಕಾಣಿಕೆ, ಅರ್ಚನೆ, ಮಂಗಳಾರತಿ ರೀತಿಯ ಸೇವೆ ಕೊರಗಜ್ಜನಿಗೆ ಇಲ್ಲ. ಕೊರಗಜ್ಜನಿಗೆ ಮೂರ್ತಿಯೂ ಇಲ್ಲ ಅಭಿಷೇಕವೂ ಇಲ್ಲ. ನಿಮಗೆ ಒಂದು ವೇಳೆ ಅಜ್ಜನ ದರ್ಶನ ಆಗಲೇಬೇಕು ಅಂತ ಇದ್ದರೆ ನೀವು 1. ದೆಕ್ಕಾಡು 2. ಸೋಮೇಶ್ವರ 3. ಬೊಲ್ಯ 4. ಮಿತ್ತಗೆಲ 5. ಉಜಿಲ 6. ತಲ 7. ದೇರಳಕಟ್ಟೆಯ ಸಾನಿಧ್ಯವನ್ನು ಮಾತ್ರ ಕಂಡು ಅಲ್ಲಿ ಹರಕೆ, ಅಗೇಲು, ಕೋಲ ಸೇವೆ ಕೊಡಬಹುದು.

ಕೊರಗಜ್ಜನ ನಂಬಿದರೆ ಕಿಂಚಿತ್ತೂ ಭಯವಿಲ್ಲ!

ಹಾಗಾದರೆ ಇಷ್ಟೆಲ್ಲಾ ಕೊರಗಜ್ಜನ ದೇಗುಲ ಅಷ್ಟೆಲ್ಲಾ ಇದೆಯಲ್ಲ? ಅಂತೀರಾ? ಕೆಲವೊಬ್ಬರಿಗೆ ಆತ ಕುಟುಂಬ ದೈವ, ಕೆಲವೊಬ್ಬರಿಗೆ ನಂಬುವ ದೈವ ಹಿಂದೆ ದನಕರು ಕಳೆದಾಗ ಹಟ್ಟಿಯ ಬಳಿ ಮೀಸಲಿಡುತ್ತಿದ್ದರು ಈಗ ಅದೇ ಕಟ್ಟೆಗಳಾಗಿವೆ. ಆದರೆ ಮೇಲೆ ಸೂಚಿಸಿದ ಕಟ್ಟೆ ಬಿಟ್ಟು ಬೇರೆಲ್ಲಿಗೂ ಕೂಡ ಕೊರಗಜ್ಜ ಘಟ್ಟ ಹತ್ತಿ ಬರೋದಿಲ್ಲ. ಹೀಗಾಗಿ ನಿಮ್ಮ ದುಡ್ಡು ವ್ಯಯಿಸುವ ಬದಲು ಹಾಗೆಯೇ ಆಡಂಬರದಿಂದ ಭಕ್ತಿ ತೋರಿಸುವ ಬದಲು ನಿಜ ಭಕ್ತಿಯಿಂದ ಕೊರಗಜ್ಜನಿಗೆ ಮನೆಯ ಹೊರಗೆ ಮೀಸಲು/ಅಗೆಲು ಇಟ್ಟು ಬೇಡಿಕೊಳ್ಳಿ. ಅಜ್ಜ ಯಾರಿಗೂ ಕೈ ಬಿಡೋದಿಲ್ಲ

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories