ರಾಮನಗರ ಜೈಲಲ್ಲಿ ಪಾದರಾಯನಪುರ ಪುಂಡರಿಗೆ ಕೊರೊನಾ : ರಾಜ್ಯ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಎಚ್ ಡಿಕೆ

0

ರಾಮನಗರ : ಕೊರೊನಾ ಸೋಂಕಿತರೇ ಇಲ್ಲದೇ ಗ್ರೀನ್ ಝೋನ್ ನಲ್ಲಿದ್ದ ರಾಮನಗರ ಜಿಲ್ಲೆಗೆ ಇದೀಗ ಪಾದರಾಯನಪುರದ ಪುಂಡರು ಆತಂಕವನ್ನು ತಂದೊಡ್ಡಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಇದೀಗ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗಿದೆ. ಎಲ್ಲಾ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡದಿದ್ರೆ ಉಗ್ರ ಹೋರಾಟ ನಡೆಸೋದಾಗಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬೆಂಗಳೂರಿಗೆ ತಾಗಿಕೊಂಡಿದ್ದರೂ ಕೂಡ ರಾಮನಗರ ಜಿಲ್ಲೆಗೆ ಕೊರೊನಾ ಸೋಂಕು ಬಾಧಿಸಲೇ ಇಲ್ಲಾ. ಜಿಲ್ಲಾಡಳಿತ ಕೊರೊನಾ ಸೋಂಕು ಜಿಲ್ಲೆಗೆ ವ್ಯಾಪಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ಗ್ರೀನ್ ಝೋನ್ ವಲಯದಲ್ಲಿದ್ದ ರಾಮನಗರಕ್ಕೀಗ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೊರೊನಾ ಆತಂಕ ಎದುರಾಗಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಪಾದರಾಯನಪುರದಲ್ಲಿ ಪುಂಡಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 121 ಮಂದಿ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ರಾಮನಗರಕ್ಕೆ ಶಿಫ್ಟ್ ಮಾಡುವ ಮೊದಲೇ ಎಲ್ಲಾ ಆರೋಪಿಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆದ್ರೀಗ ಕೊರೊನಾ ತಪಾಸಣಾ ವರದಿ ಬಂದಿದ್ದು ಆರೋಪಿಗಳ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ರಾಮನಗರದ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ.

ರಾಮನಗರದ ಕಾರಾಗೃಹಕ್ಕೆ ಕೊರೊನಾ ಸೋಂಕು ವ್ಯಾಪಿಸಿರೋ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರ ವಿರುದ್ದ ಕಿಡಿಕಾರಿದ್ದಾರೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಈ ಹಿಂದೆಯೇ ರಾಜ್ಯ ಸರಕಾರವನ್ನು ಎಚ್ಚರಿಸಿದ್ದೆ, ಆದರೆ ಸರಕಾರ ನಿರ್ಲಕ್ಷ್ಯದಿಂದಾಗಿ ರಾಮನಗರಕ್ಕೆ ಕೊರೊನಾ ವ್ಯಾಪಿಸಿದೆ, ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ. ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ರಾಮನಗರ ಜೈಲ್ ಅನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆ ಯವರು ಸಂಬಂಧಿಸಿದವರ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಎಚ್‍ಡಿಕೆ ಆಗ್ರಹಿಸಿದ್ದಾರೆ.

ಇನ್ನು ಪಾದರಾಯನಪುರದ ಗಲಾಟೆಯ ಆರೋಪಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದಾರೆ. ಕೊರೊನಾ ಸೋಂಕಿತ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದ್ದು, ಉಳಿದ ಆರೋಪಿಗಳನ್ನು ಹಜ್ ಭವನಕ್ಕೆ ಶೀಫ್ಟ್ ಮಾಡಲಾಗಿದೆ.

ಜೈಲಿನಲ್ಲಿ ಕೊರೊನಾ ಸೋಂಕಿತರು ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹವನ್ನೇ ಸೀಲ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲ ಕೊರೊನಾ ಸೋಂಕಿತರ ಜೊತೆಗಿದ್ದ ಉಳಿದ ಆರೋಪಿಗಳಿಗೂ ಕೊರೊನಾ ಸೋಂಕು ಹರಡಿರುವ ಸಾಧ್ಯತೆಯಿದ್ದು ಕ್ವಾರಂಟೈನ್ ಮಾಡಲಾಗಿದೆ. ಮಾತ್ರವಲ್ಲ ಜೈಲು ಸಿಬ್ಬಂಧಿಗಳನ್ನೂ ಕೂಡ ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆಯಿದೆ.

Leave A Reply

Your email address will not be published.