ಕೊನೆಗೂ ಮನೆ ಸೇರಿದ ದುಬೈನಿಂದ ಬಂದಿದ್ದ ಗರ್ಭಿಣಿ : ಟ್ವಿಟರ್ ನಲ್ಲಿ ಶುರುವಾಯ್ತು ಮಾಜಿ – ಹಾಲಿ ಶಾಸಕರ ನಡುವೆ ವಾರ್

0

ಉಡುಪಿ : ದುಬೈನಿಂದ ಬಂದಿದ್ದ ಗರ್ಭಿಣಿ ಮಹಿಳೆಯೋರ್ವರನ್ನು ಕ್ವಾರಂಟೈನ್ ಅವಧಿ ಮುಗಿದಿದ್ದರೂ ಮನೆಗೆ ಕಳುಹಿಸದ ಜಿಲ್ಲಾಡಳಿತ ವಿರುದ್ದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು. ಈ ನಡುವಲ್ಲೇ ಗರ್ಭಿಣಿಯನ್ನು ಜಿಲ್ಲಾಡಳಿತ ಮನೆಗೆ ಕಳುಹಿಸಿದೆ. ಆದರೆ ಇತ್ತ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಹಾಲಿ ಶಾಸಕ ರಘುಪತಿ ಭಟ್ ನಡುವೆ ಟ್ವೀಟ್ ವಾರ್ ಶುರುವಾಗಿದೆ.

ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟರ್ ಮೂಲಕ ದೂರು ನೀಡುತ್ತಿದ್ದಂತೆಯೇ, ಉಡುಪಿಯ ಶಾಸಕ ರಘುಪತಿ ಭಟ್ ಟ್ವೀಟ್ ಮಾಡಿದ್ದರು. ರಾತ್ರಿ ಹಗಲೆನ್ನದೆ ತಮ್ಮ ಜೀವದ ಹಂಗನ್ನು ತೊರೆದು ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಉಡುಪಿ ಜಿಲ್ಲಾಧಿಕಾರಿಯವರು ಸೇರಿದಂತೆ ಜಿಲ್ಲೆಯ ಸಂಪೂರ್ಣ ಅಧಿಕಾರಿಗಳ ತಂಡವನ್ನು ಪ್ರಶಂಶಿಸುವುದನ್ನು ಬಿಟ್ಟು ಅವರ ವಿರುದ್ಧ ವ್ಯರ್ಥಾ ಆರೋಪ ಮಾಡುವುದು ಸಮಂಜಸವಲ್ಲ.

ಮಾಜಿ ಸಚಿವ ಪ್ರಮೋದ್ ಕಳೆದ 60 ದಿನಗಳಿಂದ ಹೋಂ ಕ್ವಾರಂಟೈನ್ ನಲ್ಲಿದ್ದು ಜಿಲ್ಲೆಯ ಜನ ಸಾಮಾನ್ಯರ ಪರಿಸ್ಥಿತಿಯ ಬಗ್ಗೆ ಗಮನ ಹರಿಸದೆ, ಈಗ ಬಂದು ಅಧಿಕಾರಿಗಳ ಬಗ್ಗೆ ಆರೋಪಗಳನ್ನು ಹೊರಿಸಿದರೆ ಉಡುಪಿಯ ಜನತೆ ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕೆ. ರಘುಪತಿ ಭಟ್ , ಸತತ 60 ದಿನಗಳಿಂದ ಕೊರೋನಾ ಸಂಧಿಗ್ದತೆಯಿಂದ ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ನಾಯಕರುಗಳು ಇಂದು ಜಿಲ್ಲಾಧಿಕಾರಿಗಳ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದು ಟ್ವೀಟ್ ಮಾಡಿದ್ದರು.

ಶಾಸಕ ರಘುಪತಿ ಭಟ್ ಟ್ವಿಟ್ ಮಾಡುತ್ತಿದ್ದಂತೆಯೇ, ಟ್ವೀಟರ್ ನಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿತ್ತು. ಹಾಲಿ – ಮಾಜಿ ಶಾಸಕ ಬೆಂಬಲಿಗರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದರು. ಜಿಲ್ಲಾಧಿಕಾರಿಗಳ ವಿರುದ್ದ ದೂರು ನೀಡಿರುವುದಕ್ಕೆ ಕೆರಳಿದ ಶಾಸಕ ಉಡುಪಿ ರಘಪತಿ ಭಟ್ ವಿರುದ್ದ, ಟ್ವೀಟರ್ ನಲ್ಲೇ ಪ್ರಮೋದ್ ಮಧ್ವರಾಜ್ ಅವರು ಟಾಂಗ್ ಕೊಟ್ಟಿದ್ದಾರೆ. ಶಾಸಕರೇ ಕಳೆದ 60 ದಿನ ಲಾಕ್ ಡೌನ್ ಸಂದರ್ಭ ಸಾಕಷ್ಟು ಮರಳು ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದೆ, ಅಂತಹ ಅಪರಾಧಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಿ.

ನಾನು ನನ್ನ ಸಾಮಾಜಿಕ ಜೀವನದಲ್ಲಿ ನನ್ನದೇ ರೀತಿಯಲ್ಲಿ ಹಲವಾರು ವರ್ಷಗಳಿಂದ ಜನರಿಗೆ ಸಹಾಯ ಮಾಡುತ್ತ ಇದ್ದೇನೆ, ನಾನು ಯಾರಲ್ಲೂ ಬೇಡಿ ದಾನ ಧರ್ಮ ಮಾಡಿಲ್ಲ, ನನ್ನ ಸ್ವಂತ ಹಣದಲ್ಲಿ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲೂ ನನ್ನದೆ ರೀತಿಯಲ್ಲಿ ನಾನೂ ಸಹಾಯ ಮಾಡಿದ್ದೇನೆ, ಎಲ್ಲೂ ಫೋಟೊ ತೆಗೆಸಿ ಪ್ರಚಾರ ಮಾಡಿಕೊಂಡು ಬಂದಿಲ್ಲ ಎಂದು ಟ್ವಿಟ್ ಮೂಲಕ ಶಾಸಕ ರಘುಪತಿ ಭಟ್‌ಗೆ ತೀರುಗೇಟು ನೀಡಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರು ಉಡುಪಿ ಶಾಸಕರ ವಿರುದ್ದ ಆರೋಪ ಮಾಡುತ್ತಿದ್ದಂತೆಯೇ ಇಬ್ಬರ ಬೆಂಬಲಿಗರು ಸಾಕಷ್ಟು ಆರೋಪ ಪ್ರತ್ಯಾರೋಪಗಳನ್ನು ಶುರುವಿಟ್ಟುಕೊಂಡಿದ್ದಾರೆ. ಅಲ್ಲದೇ ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮೇ 27ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ಪ್ರಮೋದ್ ಮಧ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ,

ಈ ನಡುವಲ್ಲೇ ಗರ್ಭಿಣಿಯನ್ನು ಜಿಲ್ಲಾಡಳಿತ ಮನೆಗೆ ಕಳುಹಿಸಿದೆ. ಆದರೆ ಟ್ವಿಟರ್ ನಲ್ಲಿ ಹಾಲಿ ಶಾಸಕ ರಘುಪತಿ ಭಟ್ ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ನಡುವಿನ ಟ್ವೀಟ್ ವಾರ್ ಇಂದೂ ಮುಂದುವರಿದಿದೆ.

Leave A Reply

Your email address will not be published.