ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ : ವೈದ್ಯರ ನಿರ್ಲಕ್ಷ್ಯಕ್ಕೆ ಹೊಟ್ಟೆಯಲ್ಲೇ ಮಗು ಸಾವು

0

ಮಂಗಳೂರು : ದುಬೈನಿಂದ ಆಗಮಿಸಿದ್ದ ಗರ್ಭಿಣಿ ಮಹಿಳೆಯನ್ನು ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ನಲ್ಲಿರುವವರಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸಬೇಕೆಂಬ ಆದೇಶವಿದೆ. ಆದರೆ ಗರ್ಭಿಣಿ ಮಹಿಳೆಯನ್ನು ವೈದ್ಯರು ಸಕಾಲದಲ್ಲಿ ತಪಾಸಣೆಗೆ ಒಳಪಡಿಸಿಲ್ಲ. ಇದರಿಂದಾಗಿ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಗರ್ಭಿಣಿಯನ್ನು ಮೇ 12ರಂದು ದುಬೈನಿಂದ ಏರ್ ಲಿಫ್ಟ್ ಮಾಡಲಾಗಿತ್ತು. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಗರ್ಭಿಣಿ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ, ನೇರವಾಗಿ ಮಂಗಳೂರು ನಗರದ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮರುದಿನ ಗರ್ಭಿಣಿ ಮಹಿಳೆಯ ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್ ವರದಿ ಬಂದಿತ್ತು.

ಕ್ವಾರಂಟೈನ್ ನಲ್ಲಿದ್ದವರಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸುವುದಾಗಿ ಜಿಲ್ಲಾಡಳಿತ ಹಾಗೂ ಸರಕಾರಗಳು ಹೇಳುತ್ತಿವೆ. ಆದರೆ ಗರ್ಭಿಣಿ ಮಹಿಳೆಯನ್ನು ಮಾತ್ರ ವೈದ್ಯರು ತಪಾಸಣೆಗೆ ಒಳಪಡಿಸಿಲ್ಲ. ಕರೆ ಮಾಡಿದ್ರೂ ಕೂಡ ಸರಕಾರಿ ವೈದ್ಯರು ಸರಿಯಾದ ರೀತಿಯಲ್ಲಿ ಸ್ಪಂಧಿಸಿಲ್ಲ. ಒಂದೆರಡು ಬಾರಿ ತಪಾಸಣೆ ನಡೆಸಿದ್ರೂ ಕೂಡ ಬಿಪಿ ಟೆಸ್ಟ್ ಕಿಟ್ ತರದೆ ಬರಿಗೈಯಲ್ಲಿ ಬಂದಿದ್ದರು ಎನ್ನುವ ಆರೋಪವೂ ಕೇಳಿಬರುತ್ತಿದೆ.

ವಿದೇಶದಿಂದ ಬರುವ ಗರ್ಭಿಣಿಯರು, ವೃದ್ದರು ಹಾಗೂ ಮಕ್ಕಳಿಗೆ ಕೊರೊನಾ ನೆಗೆಟಿವ್ ವರದಿ ಬಂದ್ರೆ ಅವರನ್ನು ಮನೆಗೆ ಕಳುಹಿಸಬಹುದು ಅನ್ನೋ ಸರಕಾರದ ಆದೇಶವಿದೆ. ಆದರೆ ಗರ್ಭಿಣಿ ಮಹಿಳೆಯನ್ನು ಶಿವಭಾಗ್ ಸಮೀಪದ ಅಪಾರ್ಟ್ ಮೆಂಟ್ ಗೆ ತೆರಳಲು ಮುಂದಾದ್ರೆ ಹಾಲಿ ಹಾಗೂ ಮಾಜಿ ಪೊಲೀಸ್ ಅಧಿಕಾರಿಗಳು ಮಹಿಳೆಯ ವಾಸಕ್ಕೆ ಅವಕಾಶವನ್ನು ನಿರಾಕರಿಸಿದ್ದರು. ಇನ್ನು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸೋ ಪ್ರಯತ್ನ ನಡೆಸಿದ್ರೂ ವೈದ್ಯರು ಮಹಿಳೆಯನ್ನು ತಪಾಸಣೆಗೆ ಒಳಪಡಿಸಲು ಮನಸ್ಸು ಮಾಡಲಿಲ್ಲ. ಕೊನೆಗೆ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಗರ್ಭಿಣಿಯ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವುದು ಬಯಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿರೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಗರ್ಭಿಣಿಯರಿಗೆ ಕೊರೊನಾ ವರದಿ ನೆಗೆಟಿವ್ ಬಂದರೆ ಅಂತವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಅವಕಾಶವಿದೆ. ಹೀಗಿದ್ದರೂ ಕೂಡ ಗರ್ಭಿಣಿಗೆ ಅನ್ಯಾಯವಾಗಿದ್ರೆ ದೂರು ಕೊಡಲಿ. ಮಹಿಳೆಗೆ ಚಿಕಿತ್ಸೆ ನೀಡದ ವೈದ್ಯರು ಹಾಗೂ ಅಪಾರ್ಟ್ ಮೆಂಟ್ ಗೆ ಅವಕಾಶ ನೀಡದವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Leave A Reply

Your email address will not be published.