Night Curfew Effect :ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿಯ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ಅಂದರೆ ಜನವರಿ 7ರವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ . ಪ್ರತಿ ದಿನ ರಾತ್ರಿ 10 ಗಂಟೆಯಿಂದ ಆರಂಭವಾಗುವ ನೈಟ್ ಕರ್ಫ್ಯೂ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನೈಟ್ ಕರ್ಫ್ಯೂ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಕರ್ಫ್ಯೂ ಸಮಯದಲ್ಲಿ ಏನಿರುತ್ತೆ ಏನಿರಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಮಂಗಳವಾರದಿಂದ ಜನವರಿ 7ರ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ.ಅದರಲ್ಲೂ ಜನವರಿ 2ನೇ ತಾರೀಖಿನವರೆಗೆ ಕ್ಲಬ್, ರೆಸ್ಟಾರೆಂಟ್, ಹೋಟೆಲ್,ಪಬ್ಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ 50 ಪ್ರತಿಶತ ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಇಂದಿನಿಂದ ಜನವರಿ 7ನೇ ತಾರೀಖಿನವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಇರಲಿದೆ. ಮದುವೆ, ಸಭೆ ಸಮಾರಂಭಗಳಲ್ಲಿ 300 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು. ನೈಟ್ ಕರ್ಫ್ಯೂ ಅವಧಿಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆ,ಖಾಲಿ ಸರಕು ವಾಹನಗಳ ಓಡಾಟ, ಇ ಕಾಮರ್ಸ್ ಕಂಪನಿಗಳು , ಹೋಮ್ ಡೆಲಿವರಿ,ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಕೈಗಾರಿಕೆಗಳು, ಬಸ್ ಸೇರಿದಂತೆ ವಿವಿಧ ಸಾರಿಗೆ ಸೇವೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕೂರ್ಮರಾವ್ ಸ್ಪಷ್ಟಪಡಿಸಿದ್ದಾರೆ.
ಕಂಬಳ, ಯಕ್ಷಗಾನಕ್ಕೂ ಅನ್ವಯಿಸಲಿದೆ ನೈಟ್ ಕರ್ಫ್ಯೂ ನಿಯಮ :
ಇತ್ತ ಮಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಚಾರವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯಕ್ಷಗಾನ ಹಾಗೂ ಕಂಬಳಕ್ಕೂ ನೈಟ್ ಕರ್ಫ್ಯೂ ನಿಯಮ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಕಂಬಳ ಹಾಗೂ ಯಕ್ಷಗಾನದಂತಹ ಕರಾವಳಿಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಒಳಗಾಗಿ ಮುಗಿಸಬೇಕು. ಇದಕ್ಕೆ ಯಾವುದೇ ರೀತಿಯ ವಿನಾಯ್ತಿ ಇರೋದಿಲ್ಲ.ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ನಿಯಮಾವಳಿಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ :Ghar Wapsi: ಘರ್ ವಾಪಸಿ ಮಾಡಿದ ಒಂದೇ ಕುಟುಂಬದ 9 ಮಂದಿ: ಹಿಂದೂ ಧರ್ಮಕ್ಕೆ ಮರುಮತಾಂತರ
Udupi and Dakshin kannada DC statement about night curfew Effect