
ಲಂಡನ್ : ಕೊರೊನಾ… ಸದ್ಯ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ವೈರಸ್ ಸೋಂಕು ಯಾವಾಗ ಅಂತ್ಯವಾಗುತ್ತೋ ಅನ್ನೋ ಆತಂಕ ಜನರನ್ನು ಕಾಡುತ್ತಿದೆ. ಸರಕಾರಗಳು ಕೊರೊನಾ ಜೊತೆಗೆ ಜೀವನ ನಡೆಸಿ ಅಂತಿದ್ರೆ, ತಜ್ಞರು ಇನ್ನೂ 5 ರಿಂದ 10 ವರ್ಷ ಕೊರೊನಾ ಸೋಂಕು ಇರುತ್ತೆ ಅಂತಿದ್ದಾರೆ. ಆದರೆ ಈ ನಡುವಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ಯಾವಾಗ ಕೊನೆಯಾಗುತ್ತೆ ಅನ್ನೋದಕ್ಕೆ ಸುಳಿವು ಕೊಟ್ಟಿದೆ.

ವಿಶ್ವದಲ್ಲಿಯೇ ಕೊರೊನಾ ಸೋಂಕು ಅತೀ ಹೆಚ್ಚು ಬಾಧಿಸಿರುವುದು ದೊಡ್ಡಣ್ಣ ಅಮೇರಿಕಾವನ್ನು, ಎರಡನೇ ಸ್ಥಾನದಲ್ಲಿ ಬ್ರಿಜಿಲ್ ಇದ್ರೆ ಮೂರನೇ ಸ್ಥಾನದಲ್ಲಿ ಭಾರತ ದೇಶವಿದೆ. ಕೊರೊನಾ ವೈರಸ್ ಸೋಂಕು ಆರಂಭವಾಗುತ್ತಿದ್ದಂತೆಯೇ ವಿಶ್ವ ಆರೋಗ್ಯ ಸಂಸ್ಥೆಯ ಹಲವು ಎಚ್ಚರಿಕೆಗಳನ್ನು ನೀಡಿತ್ತು. ಈ ಹಿಂದೆ ಸಪ್ಟೆಂಬರ್ ವರೆಗೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತೆ ಅಂತಾ ಹೇಳಿಕೆಯನ್ನು ನೀಡಿತ್ತು.

ಆದ್ರೀಗ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಹೇಳಿಕೆ ನಿಜವಾಗಿದೆ. ಮಾತ್ರವಲ್ಲ ಕೊರೊನಾ ಸೋಂಕಿನ ಕುರಿತು ಯಾವೆಲ್ಲಾ ಮುನ್ನೆಚ್ಚರಿಕೆಯನ್ನು ವಹಿಸಬೇಕೆಂಬ ಕುರಿತು ಸೂಚನೆಯನ್ನೂ ನೀಡಿತ್ತು. ಅಲ್ಲದೇ ಇದೀಗ ಕೊರೊನಾ ವೈರಸ್ ಸೋಂಕು ಅಂತ್ಯವಾಗುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಹೇಳಿಕೆಯನ್ನು ನೀಡಿದ್ದಾರೆ.

ಜಗತ್ತಿನ ಹಲವು ರಾಷ್ಟ್ರಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಹಾಮಾರಿ ಕೊರೊನಾ ಇನ್ನು ಎರಡೇ ಎರಡು ವರ್ಷಗಳಲ್ಲಿ ಅಂತ್ಯವಾಗಲಿದೆಯಂತೆ. ಸದ್ಯದ ಸ್ಥಿತಿಯಲ್ಲಿ ಕೊರೊನಾ ವೈರಸ್ ಸೋಂಕು ಮಾಯವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಕೊರೊನಾ ಸೋಂಕು ಎಚ್1ಎನ್1 ಗಿಂತಲೂ ಕಡಿಮೆ ಅವಧಿಯಲ್ಲಿಯೇ ಕೊನೆಯಾಗಲಿದೆ.

ಕೊರೊನಾ ವೈರಸ್ ಶತಮಾನಗಳ ನಂತರದ ಆರೋಗ್ಯ ಬಿಕ್ಕಟ್ಟಾಗಿದೆ. ಜಾಗತೀಕರಣದಿಂದಾಗಿ ಕೊರೊನಾ ಎಚ್1ಎನ್1 ಗಿಂತ ಅತೀ ವೇಗವಾಗಿ ಹೆಚ್ಚು ದೇಶಗಳಿಗೆ ಹರಡಿದೆ. ವೈರಸ್ ತಡೆಯಲು ಶತಮಾನಗಳ ಹಿಂದೆ ಇಷ್ಟು ತಂತ್ರಜ್ಞಾನ ಇರಲಿಲ್ಲ. ಆದರೆ ಈಗ ವಿವಿಧ ಬಗೆಯ ತಂತ್ರಜ್ಞಾನಗಳಿವೆ. ನಮ್ಮ ಪ್ರಯತ್ನಗಳೆಲ್ಲ ಒಟ್ಟುಗೂಡಿದರೆ ಕೇವಲ ಇನ್ನು ಎರಡು ವರ್ಷಗಳಲ್ಲಿ ಕೊರೊನಾ ಇಲ್ಲದಂತಾಗುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಡಬ್ಲ್ಯುಎಚ್‍ಒ ನ ತುರ್ತು ವಿಭಾಗದ ಮುಖ್ಯಸ್ಥ ಡಾ.ಮೈಕಲ್ ರ್ಯಾನ್ ಈ ಕುರಿತು ವಿವರಿಸಿ, ಎಚ್1ಎನ್1 ಸಾಂಕ್ರಾಮಿಕ ರೋಗವು ಮೂರು ವಿಭಿನ್ನ ಹಂತಗಳಲ್ಲಿ ಭೂಗೋಳವನ್ನು ಅಪ್ಪಳಿಸಿತ್ತು. ಎರಡನೇ ಹಂತದಲ್ಲಿ ಎಚ್1ಎನ್1 ಭಾರೀ ವಿನಾಶಕಾರಿಯಾಗಿತ್ತು. ಆದರೆ ಕೊರೊನಾ ವೈರಸ್ ಸಹ ಅದೇ ರೀತಿ ಕಾಡುತ್ತದೆ ಎಂದು ತೋರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್ ಎಚ್1ಎನ್1 ರೀತಿಯಲ್ಲೇ ಅಲೆ ಎಬ್ಬಿಸಲಿದೆ ಎಂಬ ಕುರಿತು ಯಾವುದೇ ಸೂಚನೆ ಸಿಗುತ್ತಿಲ್ಲ. ವೈರಸ್ ನಿಯಂತ್ರಣ ದಲ್ಲಿಲ್ಲವಾದಾಗ ನೇರವಾಗಿ ಹಿಂದಕ್ಕೆ ಹೋಗುತ್ತದೆ. ಸಾಂಕ್ರಾಮಿಕ ವೈರಸ್‍ಗಳು ಕಾಲೋಚಿತ ಮಾದರಿಯಲ್ಲಿ ನೆಲೆಗೊಳ್ಳುತ್ತವೆ. ಆದರೆ ಆ ರೀತಿಯ ಯಾವುದೇ ಸೂಚನೆ ಕೊರೊನಾ ವೈರಸ್ ವಿಚಾರದಲ್ಲಿ ಕಂಡು ಬರುತ್ತಿಲ್ಲ ಎಂದು ರ್ಯಾನ್ ವಿವರಿಸಿದ್ದಾರೆ.