ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದ್ರೂ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದೆ. ಹೀಗಿದ್ರೂ ರಾಜ್ಯ ಸರಕಾರ ಎಪ್ರಿಲ್ 20ರಿಂದ ಐಟಿ- ಬಿಟಿ ಕಂಪೆನಿಗಳನ್ನು ಓಪನ್ ಮಾಡೋದಕ್ಕೆ ಹೊರಟಿದೆ. ಒಂದೊಮ್ಮೆ ಐಟಿ – ಬಿಟಿ ಕಂಪೆನಿಗಳು ಓಪನ್ ಆದ್ರೆ ರಾಜ್ಯಕ್ಕೆ ಬಾರೀ ಗಂಡಾಂತರ ಎದುರಾಗೋದು ಗ್ಯಾರಂಟಿ !

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದೆ. ಬೆಂಗಳೂರಿನ ಹಲವು ವಾರ್ಡುಗಳನ್ನು ಸೀಲ್ ಡೌನ್ ಮಾಡಲಾಗಿದೆ. ಜನರನ್ನು ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಲಾಗ್ತಿದೆ. ಆದ್ರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ ಮಹಾಮಾರಿಯ ಆರ್ಭಟ ಆತಂಕವನ್ನು ತಂದೊಡ್ಡಿದೆ.

ಇದೇ ಕಾರಣಕ್ಕೆ ಕೇಂದ್ರ ಸರಕಾರ ಲಾಕ್ ಡೌನ್ ಆದೇಶವನ್ನು ಮೇ 3ರ ವರೆಗೂ ಮುಂದುವರಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ ರಾಜ್ಯ ಸರಕಾರ ಮಾತ್ರ ಲಾಕ್ ಡೌನ್ ನಿಂದ ಐಟಿ ಬಿಟಿ ಕಂಪೆನಿಗಳಿಗೆ ವಿನಾಯಿತಿ ನೀಡಲು ಹೊರಟಿದೆ. ಎಪ್ರಿಲ್ 20ರಿಂದಲೇ ಬೆಂಗಳೂರಲ್ಲಿ ಐಟಿ ಬಿಟಿ ಕಂಪೆನಿಗಳನ್ನು ಓಪನ್ ಮಾಡಲು ಅವಕಾಶ ಕಲ್ಪಿಸುವುದಾಗಿಯೂ ಘೋಷಿಸಿದೆ. ಸರಕಾರದ ಕ್ರಮ ಇದೀಗ ರಾಜ್ಯದ ಜನರಿಗಷ್ಟೇ ಅಲ್ಲಾ ಐಟಿ ಉದ್ಯೋಗಿಗಳಿಗೂ ಆತಂಕವನ್ನು ತಂದೊಡ್ಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದೇ ಐಟಿ ಕಂಪೆನಿಗಳ ಸಿಬ್ಬಂಧಿಗಳಿಂದ. ಹೀಗಾಗಿಯೇ ಲಾಕ್ ಡೌನ್ ಆದೇಶಕ್ಕೂ ಮುನ್ನವೇ ರಾಜ್ಯ ಸರಕಾರ ಐಟಿ -ಬಿಟಿ ಕಂಪೆನಿಗಳ ಸಿಬ್ಬಂಧಿಗಳಿಗೆ ವರ್ಕ್ ಫ್ರಂ ಹೋಮ್ ಮಾಡೋದಕ್ಕೆ ಆದೇಶ ಹೊರಡಿಸಿತ್ತು. ಸರಕಾರದ ಆದೇಶದ ಬೆನ್ನಲ್ಲೇ ಬೆಂಗಳೂರಿನ ಐಟಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರೋ ಸುಮಾರು 5 ಲಕ್ಷ ಐಟಿ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸೋದಕ್ಕೆ ಆರಂಭಿಸಿದ್ದರು.

ಅಲ್ಲದೇ ಸಿಲಿಕಾನ್ ಸಿಟಿಯ ಐಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಐಟಿ ಕಂಪೆನಿಗಳು ತಮ್ಮೂರಿಗೆ ತೆರಳಿದ್ದಾರೆ. ಆದ್ರೀಗ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕೇರಳ ರಾಜ್ಯಗಳಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಎಪ್ರಿಲ್ 20 ರಿಂದ ಐಟಿ ಕಂಪೆನಿಗಳು ಆರಂಭವಾಗೋ ಹಿನ್ನೆಲೆಯಲ್ಲಿ ಐಟಿ ಸಿಬ್ಬಂಧಿಗಳಿಗೆ ಬೆಂಗಳೂರಿಗೆ ಬರಲು ಅವಕಾಶ ನೀಡೋದಾಗಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಹೇಳ್ತಿರೋದು ಆತಂಕವನ್ನು ತಂದೊಡ್ಡಿದೆ.

ಶೇ. 50 ರಷ್ಟು ಉದ್ಯೋಗಿಗಳಿಗೆ ಮಾತ್ರವೇ ಕೆಲಸ ನಿರ್ವಹಿಸೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಅಂತಾ ರಾಜ್ಯ ಸರಕಾರ ಹೇಳುತ್ತಿದೆ. ಶೇ.50 ರಷ್ಟು ಅಂದ್ರೆ ಸುಮಾರು 2.5 ಲಕ್ಷ ಉದ್ಯೋಗಿಗಳು ಬೆಂಗಳೂರಿಗೆ ಬರ್ತಾರೆ. ಅದ್ರಲ್ಲೂ ಹೊರ ರಾಜ್ಯಗಳ ಐಟಿ ಉದ್ಯೋಗಿಗಳಿಗೆ ಅವಕಾಶವನ್ನು ಕಲ್ಪಿಸಿದ್ರೆ, ಕೊರೊನಾ ಸೋಂಕು ವ್ಯಾಪಿಸೋ ಸಾಧ್ಯತೆ ತೀರಾ ಹೆಚ್ಚು. ಇನ್ನು ಕೊರೊನಾ ಸೋಂಕು ಹಲವರಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತಿದೆ. ಕೊರೊನಾ ವೈರಸ್ ಸೋಂಕು ಎಸಿ ಬಳಕೆ ಮಾಡೋದ್ರಿಂದ ಹೆಚ್ಚುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಐಟಿ ಕಂಪೆನಿಗಳು ಆರಂಭವಾಗೋದ್ರಿಂದಾಗಿ ಸಾವಿರಾರು ಸಂಖ್ಯೆಯ ವಾಹನಗಳು ರಸ್ತೆಗೆ ಇಳಿಯಲಿವೆ. ಹೀಗಾಗಿ ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಳವಾಗಲಿದೆ. ಸಾಲದಕ್ಕೆ ಐಟಿ ಕಂಪೆನಿಗಳಲ್ಲಿ ಎಸಿ ಬಳಕೆ ಮಾಡೋದ್ರ ಜೊತೆಗೆ ಲಕ್ಷಾಂತರ ಮಂದಿ ಒಂದೆಡೆ ಇರೋದ್ರಿಂದ ಕೊರೊನಾ ಹರಡುವ ಸಾಧ್ಯತೆ ತೀರಾ ಹೆಚ್ಚು ಹೀಗಾಗಿಯೇ ಐಟಿ ಉದ್ಯೋಗಿಗಳು ಕೂಡ ಕಂಪೆನಿಗಳಿಗೆ ಹಾಜರಾಗೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ ಹೆಸರಲ್ಲಿ ರಾಜ್ಯ ಸರಕಾರ ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ದ ಕೇಸು ದಾಖಲಿಸುತ್ತಿದೆ. ಆದ್ರೆ ಪ್ರತೀ ಕಂಪೆನಿಗಳಲ್ಲಿಯೂ ನೂರಾರು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸೋ ಐಟಿ ಬಿಟಿ ಕಂಪೆನಿಗಳಿಗೆ ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡೋದಕ್ಕೆ ಯಾಕಿಷ್ಟು ಉತ್ಸಾಹ ತೋರುತ್ತಿದೆ ಅನ್ನೋದು ಹಲವರ ಪ್ರಶ್ನೆ.

ಒಂದೊಮ್ಮೆ ಐಟಿ ಬಿಟಿ ತೆರೆದ್ರೆ ಸಿಲಿಕಾನ್ ಸಿಟಿ ಕೊರೊನಾ ಹಾಟ್ ಸ್ಪಾಟ್ ಆಗೋದು ಗ್ಯಾರಂಟಿ. ಇದುವರೆಗೂ ಕೊರೊನಾ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಂಡಿರೋ ರಾಜ್ಯ ಸರಕಾರ ಇದೀಗ ಸಮಸ್ಯೆಯನ್ನೆ ತಾನಾಗಿಯೇ ಮೈ ಮೇಲೆ ಎಳೆದುಕೊಳ್ಳುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸೋಮವಾರದಿಂದಲೇ ಐಟಿ ಕಂಪೆನಿಗಳನ್ನು ಆರಂಭಿಸೋದಾಗಿ ಹೇಳುತ್ತಿರೋ ಸರಕಾರ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದು ಕೂಡ ಸ್ಪಷ್ಟವಾಗುತ್ತಿಲ್ಲ. ಕಂಪೆನಿಗಳಲ್ಲಿ ಯಾವೆಲ್ಲಾ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬ ಕುರಿತು ಕೂಡ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಬಳಿ ಉತ್ತರವಿಲ್ಲ. ಇನ್ನಾದ್ರೂ ಸರಕಾರ ಈ ಬಗ್ಗೆ ಕೂಲಂಕುಷವಾಗಿ ಪರಾಮರ್ಷಿಸಿ ಕ್ರಮಕೈಗೊಳ್ಳುವುದು ಸೂಕ್ತ ಅನ್ನೋದು ತಜ್ಞರ ಅಭಿಪ್ರಾಯ.