iPhone gift to MLAs: ಎಲ್ಲಾ ಶಾಸಕರಿಗೆ ಐಫೋನ್ ಉಡುಗೊರೆ ನೀಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ರಾಜಸ್ಥಾನ ರಾಜ್ಯದ 2022-23 ನೇ ಸಾಲಿನ ಬಜೆಟ್ (Rajasthan Budget 2022-23) ಮಂಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, (Rajasthan CM Ashok Gehlot) ಬಜೆಟ್ ಪ್ರತಿಯೊಂದಿಗೆ ಎಲ್ಲಾ 200 ಶಾಸಕರಿಗೆ ಐಫೋನ್ 13 ಅನ್ನು ಉಡುಗೊರೆಯನ್ನಾಗಿ (iPhone gift to MLAs) ನೀಡಿದ್ದಾರೆ. ಅಂದಹಾಗೆ ಪ್ರತಿ iPhone-13ರ ಬೆಲೆ 70,000 ರೂ. ಆಗಿದ್ದು ಜನರ ತೆರಿಗೆ ಹಣವನ್ನು ಶಾಸಕರ ಉಡುಗೊರೆಗೆ ಬಳಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿದೆ.

ರಾಜಸ್ಥಾನದ ಶಾಸಕರು ಸಿಎಂ ಅವರಿಂದ ದುಬಾರಿ ಉಡುಗೊರೆ ಪಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಶಾಸಕರಿಗೆ ಬಜೆಟ್ ಪ್ರತಿಯೊಂದಿಗೆ ಐಪ್ಯಾಡ್‌ಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉಡುಗೊರೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈನಡುವೆಯೇ ಕೆಲ ಶಾಸಕರು ಸರ್ಕಾರ ಫೋನ್ ನೀಡಿರುವುದರಿಂದ ಜನಪರ ಕೆಲಸ ಮಾಡುತ್ತೇನೆ ಎಂದು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಪೂನಿಯಾ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ಎಲ್ಲಾ ಶಾಸಕರು ಐಫೋನ್ ವಾಪಸ್ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಸತೀಶ್ ಪೂನಿಯಾ, “ಗುಲಾಬ್ ಕಟಾರಿಯಾ, ರಾಜೇಂದ್ರ ರಾಥೋಡ್ ಮತ್ತು ಇತರ ಶಾಸಕರೊಂದಿಗೆ ಚರ್ಚಿಸಿದ ನಂತರ, ರಾಜ್ಯದ ಮೇಲಿನ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ನೀಡಿದ ಐಫೋನ್ ಅನ್ನು ರಾಜಸ್ಥಾನದ ಎಲ್ಲಾ ಬಿಜೆಪಿ ಶಾಸಕರು ಹಿಂತಿರುಗಿಸಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಡಿಸಿದ 2022-23ರ ರಾಜಸ್ಥಾನ ರಾಜ್ಯ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಮತ್ತು ಸಾಮಾಜಿಕ ಭದ್ರತೆಯ ಮೇಲೆ ಮುಖ್ಯ ಗಮನ ಕೇಂದ್ರೀಕೃತವಾಗಿತ್ತು. ಅಲ್ಲದೇ ರಾಜಸ್ಥಾನ ರಾಜ್ಯದ ಮೊದಲ ಪ್ರತ್ಯೇಕ ಕೃಷಿ ಬಜೆಟ್‌ನ್ನು ಸಹ ಸಿಎಂ ಅಶೋಕ್ ಗೆಹ್ಲೋಟ್ ಮಂಡಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ನೀಡಲಾಗಿದ್ದ 2,000 ಕೋಟಿ ರೂ.ಗಳಿಂದ ‘ರಾಜಸ್ಥಾನ ಮುಖ್ಯಮಂತ್ರಿ ಕೃಷಿಕ ಸಾಥಿ ಯೋಜನೆ’ಗೆ 5,000 ಕೋಟಿ ರೂಗೆ ಪ್ರೋತ್ಸಾಹ ಧನವನ್ನು ಬಜೆಟ್‌ನಲ್ಲಿ ಏರಿಸಲಾಗಿದೆ.

ಇದನ್ನೂ ಓದಿ: Russia vs Ukraine War: ಯುದ್ಧದ ವೇಳೆ ರಷ್ಯಾಕ್ಕೆ ಭೇಟಿ ಕೊಟ್ಟದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ರೋಮಾಂಚನ ನೀಡಿದೆಯಂತೆ!

(iPhone gift to MLAs Rajasthan CM Ashok Gehlot in Budget)

Comments are closed.