ಇನ್ಮುಂದೆ ಲೋಕಲ್ ಕೇಬಲ್ ಟಿ ವಿ ಚಾನೆಲ್ ಗಳ ಮೂಲಕ ನಡೆಯುತ್ತೆ ತರಗತಿಗಳು : ಅಷ್ಟಕ್ಕೂ ಶಿಕ್ಷಣ ಸಚಿವರು ಹೇಳಿದ್ದೇನು?

0

ಬೆಂಗಳೂರು : ಒಂದರಿಂದ ಎಂಟನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಲೋಕಲ್‌ ಕೇಬಲ್‌ ಟಿವಿ ಚಾನೆಲ್‌ಗಳ ಮೂಲಕ ತರಗತಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚರ್ಚಿಸಬೇಕಾದ ವಿಷಯಗಳ ಕುರಿತು ಬುಧವಾರ ಸಮಗ್ರ ಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ವಿವಿಧ ವೆಬಿನಾರ್‌ಗಳ ಮೂಲಕ ಸಚಿವರು ಚರ್ಚೆ ನಡೆಸಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಸಂವೇದಾ ಕಾರ್ಯಕ್ರಮದ ಮೂಲಕ ದೂರದರ್ಶನದ ಚಂದನವಾಹಿನಿಯಲ್ಲಿ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಪಾಠ ಪ್ರವಚನ ನಡೆಸಲಾಗುತ್ತಿದೆ.ಇನ್ನು 1 ರಿಂದ 8 ನೇ ತರಗತಿಯ ಮಕ್ಕಳಿಗೆ ಲೋಕಲ್ ಕೇಬಲ್ ಟಿ ವಿ ಚಾನಲ್ ಮೂಲಕ ತರಗತಿ ನಡೆಸಲು ಕ್ರಮ ವಹಿಸಲಾಗುತ್ತಿದ್ದು,  ಶೀಘ್ರ ಪ್ರಾರಂಭವಾಗಲಿದೆ. ಸಂವೇದಾ ತರಗತಿಗಳು ವಿದ್ಯಾಗಮದೊಂದಿಗೆ ಸಂಯೋಜನೆಗೊಂಡಿದ್ದು, ನಮ್ಮ ಇಲಾಖೆಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಹಾ ಲಭ್ಯವಿದೆ ಎಂದು ವಿವರಿಸಿದರು.

ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಪೋಷಕರಿಂದ ಶುಲ್ಕ ಸಂಗ್ರಹಕ್ಕೆ ಒತ್ತಾಯ ಮಾಡಬಾರದೆಂದು ನಾವು ಆದೇಶಿಸಿದ್ದೆವು. ಆದರೆ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಸಮಸ್ಯೆಯಾಗಿರುವ ಅಂಶ ಪರಿಗಣಿಸಿ ಕಳೆದ 15 ದಿನಗಳ ಹಿಂದೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Leave A Reply

Your email address will not be published.