ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ : BEO, ಸಿಬ್ಬಂದಿ ಎಸಿಬಿ ವಶಕ್ಕೆ

ಕೊಪ್ಪಳ : ಶಾಲೆಯೊಂದರ ಠೇವಣಿ ಹಣ ವಾಪಾಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಬಿಇಓ ಹಾಗೂ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಬಿಇಓ ಉಮಾದೇವಿ‌ ಸೊನ್ನದ್, ಎಸ್ ಡಿಎ ಅರುಂದತಿ ಎಸಿಬಿ ಬಲೆಗೆ ಬಿದ್ದವರು. ಭಾಗ್ಯನಗರದಲ್ಲಿರುವ ಎಸ್ಎಸ್ ಕೆ ಶಾಲೆ ಮಕ್ಕಳ ಕೊರತೆಯಿಂದ ಬಂದ್ ಆಗಿದ್ದು, ಶಾಲಾರಂಭಕ್ಕೂ ಮೊದಲು ನೀಡಲಾಗಿದ್ದ 10 ಸಾವಿರ ರೂಪಾಯಿ ಠೇವಣಿ ಹಣವನ್ನು ವಾಪಾಸ್ ನೀಡುವಂತೆ ಬಿಇಓಗೆ ಶಾಲಾ ಮುಖ್ಯಸ್ಥರಾದ ಬಾಲು ಕಬಾಡಿ ಎಂಬವರು ಅರ್ಜಿ ಸಲ್ಲಿಸಿದ್ದರು.

ಆದರೆ ಬಿಇಓ ಠೇವಣಿ ಹಣದಲ್ಲಿ 5 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ‌ ಹಿನ್ನೆಲೆಯಲ್ಲಿ ಶಾಲಾ ಮುಖ್ಯಸ್ಥರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಂತಯೇ ಬಾಲು ಕಬಾಡಿ ಅವರು ಬಿಇಓ ಅವರಿಗೆ 5 ಸಾವಿರ ರೂಪಾಯಿ ಲಂಚ ನೀಡುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್ ಡಿಎ ಅರುಂಧತಿಯನ್ನು ಪೊಲೀಸರು ಬಂಧಿಸಿದ್ದು, ಬಿಇಓ ಉಮಾದೇವಿ ಸೊನ್ನದ ತಲೆ ಮರೆಯಿಸಿಕೊಂಡಿದ್ದಾರೆ.

ಬಳ್ಳಾರಿ ಎಸ್ ಪಿ ಗುರುನಾಥ ಮತ್ತೂರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಶಿವಕುಮಾರ್, ಎಸ್ಎಸ್ ಬೀಳಗಿ, ಎಸ್ ಐ ಬಾಳನಗೌಡ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ನಾಪತ್ತೆಯಾಗಿರುವ ಬಿಇಓಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Comments are closed.