ಬೆಳ್ತಂಗಡಿ ಎಕ್ಸೆಲ್ ಟೆಕ್ನೋ ಸ್ಕೂಲ್ ಆಡಳಿತ ಮಂಡಳಿ ವಿರುದ್ಧ FIR
ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಹಾಗೂ ಸದಸ್ಯರುಗಳಾದ ಸಹನಾ ಜೈನ್ ಬಿ. , ಸತೀಶ್ ಕುಮಾರ್ ಜೈನ್ ಬಿ. ಮತ್ತು ಶುಭಲತಾ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ : ಹೊಸದಾಗಿ ಶಾಲೆ ಆರಂಭಿಸಲು ನಕಲಿ ದಾಖಲೆ ಸೃಷ್ಟಿಸಿ, ಶಿಕ್ಷಣ ಇಲಾಖೆಗೆ ಸಲ್ಲಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಎಕ್ಸೆಲ್ ಟೆಕ್ನೋ ಸ್ಕೂಲ್ (belthangady excel techno school) ನ ಆಡಳಿತ ಮಂಡಳಿಯ ನಾಲ್ವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಕಲಿ ದಾಖಲೆ ಸೃಷ್ಟಿಸಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು, ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ವಿರುದ್ಧ ನಕಲಿ ದಾಖಲೆಯ ಸಲ್ಲಿಕೆ ಆರೋಪ ಕೇಳಿಬಂದಿದ್ದು,. ಈ ಸಂಬಂಧ ಈ ಸಂಸ್ಥೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಜಿ.ಎಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಎಕ್ಸೆಲ್ ಟೆಕ್ನೋ ಸ್ಕೂಲ್ ವಿರುದ್ದ ಏನಿದು ಪ್ರಕರಣ ?
ಉಜಿರೆಯ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ವಿಕ್ಷೆಲ್ ಟೆಕ್ನೋ ಸ್ಕೂಲ್ ಆರಂಭಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಹಾಗೂ ಸದಸ್ಯರುಗಳಾದ ಸಹನಾ ಜೈನ್ ಬಿ. , ಸತೀಶ್ ಕುಮಾರ್ ಜೈನ್ ಬಿ. ಮತ್ತು ಶುಭಲತಾ ಎಂಬವರು ಗುರುವಾಯನಕೆರೆಯಲ್ಲಿ ಪ್ರಿ ಪ್ರೈಮೆರಿಯಿಂದ 10ನೇ ತರಗತಿವರೆಗೆ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಕೋರಿದ್ದರು.
Also Read : ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಇಂಟರ್ನ್‌ಶಿಪ್ ಅವಕಾಶ; ತಿಂಗಳಿಗೆ 10,000 ಸ್ಟೈಫಂಡ್
ಶಿಕ್ಷಣ ಇಲಾಖೆಗೆ ಶಾಲಾರಂಭಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ತಂತ್ರಾಶದಲ್ಲಿ ಅಗತ್ಯ ದಾಖಲೆಗಳನ್ನು ದೃಢಿಕರಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಶಾಲೆ ಕಟ್ಟಡದ ಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು ತಿರುಚಿ ಸಲ್ಲಿಕೆ ಮಾಡಿರುವುದು ಪರಿಶೀಲನೆಯ ವೇಳೆ ಇಲಾಖಾ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಆರೋಪಿಗಳು ಶಾಲೆಯನ್ನು ಆರಂಭಿಸಬೇಕು ಎಂಬ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ನಕಲಿ ದಾಖಲೆಗಳನ್ನು ಸೃಷ್ಠಿಸಿ ಶಿಕ್ಷಣ ಇಲಾಖೆಯ ತಂತ್ರಾಶದಲ್ಲಿ ಅಪ್ಲೋಡ್ ಮಾಡಿದ್ದಾರೆ.
Also Read : ಇಂಜಿನಿಯರಿಂಗ್ ಪದವೀಧರರಿಗೆ ‘AI’ ತರಬೇತಿಗೆ ಸಿಗಲಿದೆ ₹2 ಲಕ್ಷ ರೂಪಾಯಿ
ಇದು ಕಾನೂನುಬಾಹಿರ ನಡೆಯಾಗಿದ್ದು ಶಿಕ್ಷಣ ಇಲಾಖೆಗೆ ನಕಲಿ ದಾಖಲೆ ಸಲ್ಲಿಸಿ ವಂಚಿಸಲು ಯತ್ನಿಸಿದ ಆರೋಪದ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



