ರಾಜ್ಯದಲ್ಲಿ 863 ಮಕ್ಕಳಿಗೆ ಕೊರೊನಾ ಸೋಂಕು : ಶಾಲೆ ತೆರೆದ ವಿದೇಶಗಳಲ್ಲಿಯೂ ಹೆಚ್ಚಿತ್ತು ಮಹಾಮಾರಿ !

0

ಬೆಂಗಳೂರು : ರಾಜ್ಯ ಸರಕಾರ ಕೊರೊನಾ ಮಹಾಮಾರಿಯ ನಡುವಲ್ಲೇ ಶಾಲೆಗಳನ್ನು ತೆರೆಯಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ಬರೋಬ್ಬರಿ 863 ಮಂದಿ ಮಕ್ಕಳಿಗೆ ಮಹಾಮಾರಿ ಒಕ್ಕರಿಸಿದೆ. ಇನ್ನೊಂದೆಡೆ ಶಾಲೆಗಳನ್ನು ತೆರೆದಿರುವ ಬಹುತೇಕ ರಾಷ್ಟ್ರಗಳಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಸೋಂಕು ವ್ಯಾಪಿಸಿದೆ. ಹೀಗಾಗಿ ರಾಜ್ಯದಲ್ಲಿಯೂ ಶಾಲೆ ಆರಂಭವಾದ್ರೆ ಕೊರೊನಾ ಹಾಟ್ ಸ್ಪಾಟ್ ಆಗೋ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ನಾಲ್ಕು ಸಾವಿರದ ಗಡಿದಾಟಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಮಹಾಮಾರಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ನಿತ್ಯವೂ ಸರಾಸರಿ 300ಕ್ಕೂ ಅಧಿಕ ಮಂದಿಗೆ ಸೋಂಕು ವ್ಯಾಪಿಸುತ್ತಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಕೊರೊನಾ ಪೀಡಿತರ ಪೈಕಿ ಶೇ. 20ರಷ್ಟು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 0 ಯಿಂದ 5 ವರ್ಷದೊಳಗಿನ 143 ಮಕ್ಕಳು, 5 ವರ್ಷದಿಂದ 10 ವರ್ಷದೊಳಗಿನ 184 ಮಕ್ಕಳು ಹಾಗೂ 10 ವರ್ಷದಿಂದ 20 ವರ್ಷದೊಳಗಿನ 536 ಮಕ್ಕಳು ಈಗಾಗಲೇ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಈ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಿದ್ರೆ ಕೊರೊನಾ ಮಹಾಮಾರಿ ಒಕ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಬೆನ್ನಲ್ಲೇ ಶಾಲೆಗಳನ್ನು ಆರಂಭಿಸಿರುವ ದೇಶಗಳು ಇದೀಗ ತತ್ತರಿಸಿವೆ. ಬ್ರಿಟನ್ ದೇಶದಲ್ಲಿ ಶಾಲೆಗಳನ್ನು ಆರಂಭಿಸಲಾಗಿದ್ದು, ಶಾಲೆ ಆರಂಭವಾಗುತ್ತಲೇ 7 ಮಂದಿ ಸಿಬ್ಬಂಧಿಗಳಿಗೆ ಸೋಂಕು ಒಕ್ಕರಿಸಿದೆ. ಇನ್ನು ಫ್ರಾನ್ಸ್ ದೇಶದಲ್ಲಿ ಶಾಲೆ ಆರಂಭವಾದ ಕೂಡಲೇ 70 ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದ್ರಲ್ಲೂ ಇಸ್ರೇಲ್ ನಲ್ಲಿ ಶಾಲೆ ಆರಂಭವಾದ ಒಂದೇ ಒಂದು ವಾರಕ್ಕೆ ಬರೋಬ್ಬರಿ 10,000ಕ್ಕೂ ಅಧಿಕ ಮಕ್ಕಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂಧಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಮಕ್ಕಳನ್ನು ಹೆಚ್ಚಾಗಿ ಕೊರೊನಾ ಸೋಂಕು ವ್ಯಾಪಿಸಿದೆ. ಶಾಲೆಗಳನ್ನು ಆರಂಭ ಮಾಡಿದ್ರೆ ಶಾಲೆಗಳು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯದ ಶಾಲೆಗಳಲ್ಲಿ ಅಷ್ಟು ಸುಲಭಕ್ಕೆ ಸಾಮಾಜಿಕ ಅಂತರ, ಪಾಳಿಪದ್ದತಿಯಲ್ಲಿ ಶಾಲೆ ನಡೆಸುವುದರಿಂದ ಕೊರೊನಾ ಹರಡುವುದೇ ಇಲ್ಲಾ ಅನ್ನು ಯಾವ ಗ್ಯಾರಂಟಿಯೂ ಇಲ್ಲ. ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿ ಶಿಕ್ಷಣ ನೀಡಿದ್ರೂ ಕೂಡ, ಮಕ್ಕಳು ಶಾಲೆಯಲ್ಲಿರುವ ಶೌಚಾಲಯವನ್ನೇ ಬಳಕೆ ಮಾಡಬೇಕಿದೆ. ಬಹುತೇಕ ಶಾಲೆಗಳಿಗೆ ಮಕ್ಕಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿಯೇ ಪ್ರಯಾಣಿಸಬೇಕಿದೆ. ಗ್ರಾಮೀಣ ಭಾಗಗಳಲ್ಲಿನ ಬಸ್ಸುಗಳಲ್ಲಿ ಮಕ್ಕಳು ನೇತಾಡಿಕೊಂಡು ಶಾಲೆಗೆ ಬರುವುದನ್ನು ಕಣ್ಣಾರೆ ಕಂಡಿದ್ದೇವೆ. ಇನ್ನು ಖಾಸಗಿ ಶಾಲೆಗಳೇ ಬಸ್ಸಿನ ವ್ಯವಸ್ಥೆ ಆರಂಭಿಸಿದ್ರೂ ಕೂಡ ಮಕ್ಕಳನ್ನ ಸಾಮಾಜಿಕ ಅಂತರದಲ್ಲಿ ಕರೆತರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿದಿರುವಷ್ಟು ಸುಲಭವಲ್ಲ. ಜೊತೆಗೆ ತರಗತಿಗಳನ್ನು ಪ್ರತಿನಿತ್ಯವೂ ಸ್ಯಾನಿಟೈಸ್ ಮಾಡುವುದು ಅಸಾಧ್ಯ. ಯಾವುದಾದರೂ ವಿದ್ಯಾರ್ಥಿಗೆ, ಶಿಕ್ಷಕರಿಗೆ, ಸಿಬ್ಬಂಧಿಗೆ ಸೋಂಕು ಕಾಣಿಸಿಕೊಂಡ್ರೆ ಶಾಲೆಯನ್ನೇ ಸೀಲ್ ಡೌನ್ ಮಾಡಲೇ ಬೇಕಾಗುತ್ತದೆ. ಅಲ್ಲದೇ ಸಾವಿರಾರು ಜನರನ್ನು ಕ್ವಾರಂಟೈನ್ ಗೆ ಒಳಪಡಿಸಬೇಕಾಗುತ್ತದೆ ಅನ್ನುವುದು ತಜ್ಞರ ಅಭಿಪ್ರಾಯ.

ಶಿಕ್ಷಕರಿಂದಲೂ ಕೊರೊನಾ ಆತಂಕ !
ರಾಜ್ಯ ಸರಕಾರ ಜೂನ್ 5 ರಿಂದ ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ತೆರಳೋದಕ್ಕೆ ರೆಡಿಯಾಗಿದ್ದಾರೆ. ಶಾಲೆ ಆರಂಭದ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಹೀಗಿರುವಾಗ ಶಿಕ್ಷಕರು ದೂರದೂರುಗಳಿಂದ ಶಾಲೆಗಳಿಗೆ ತೆರವುದು ಕೂಡ ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ಶಿಕ್ಷಕರು ಶಾಲೆ ಹಾಜರಾಗುವುದುರಿಂದ ಸೋಂಕು ಹರಡುವ ಭೀತಿ ಎದುರಾಗಿದೆ. ಶಾಲೆಗಳಲ್ಲಿನ ಶಿಕ್ಷಕರು ಸಾಮಾನ್ಯ ಶೌಚಾಲಯ ಬಳಕೆ ಮಾಡುವುದರಿಂದಲೂ ಸಮಸ್ಯೆಯಾಗುವ ಸಾಧ್ಯತೆಯಿದೆ. ಜೂನ್ 25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದೆ. ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಶಿಕ್ಷಕರು ಕೂಡ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಪರೀಕ್ಷೆ ಆರಂಭಕ್ಕೂ 20 ದಿನಗಳ ಮೊದಲೇ ಶಿಕ್ಷಕರನ್ನು ಶಾಲೆಗೆ ಕರೆಯಿಸುವುದರಿಂದ ಒಂದೊಮ್ಮೆ ಶಿಕ್ಷಕರು ಸೋಂಕು ಪೀಡಿತರಾದ್ರೆ, ಪರೀಕ್ಷಾ ಮೇಲ್ವಿಚಾರಣೆಯ ಮೇಲೆಯೂ ಹೊಡೆತ ಬೀಳುವ ಸಾಧ್ಯತೆಯಿದೆ. ಇನ್ನು ಶಾಲೆ ಯಾವಾಗ ಆರಂಭವಾಗುತ್ತೆ ಅನ್ನೋದು ಗ್ಯಾರಂಟಿಯಿಲ್ಲ. ಹೀಗಿರುವಾಗ ಶಿಕ್ಷಕರನ್ನು ಶಾಲೆಗೆ ಕರೆಯಿಸುವುದು ಅವೈಜ್ಞಾನಿಕ ಅನ್ನುವ ಕುರಿತು ಶಿಕ್ಷಕರ ಸಂಘಗಳು ಈಗಾಗಲೇ ಸರಕಾರಕ್ಕೆ ಮನವಿ ಮಾಡಿವೆ. ಅಲ್ಲದೇ ಶಿಕ್ಷಕರು ಸೋಂಕಿತರಾದ್ರೆ ಕೊರೊನಾ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆಯೂ ಇದೆ. ಹೀಗಾಗಿ ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಲೇ ಭೇಕಿದೆ.

Leave A Reply

Your email address will not be published.