ಕೊರೊನಾ ಲಾಕ್ ಡೌನ್ ನಲ್ಲಿ ಗಣಿತ ಶಿಕ್ಷಕರಾದ ದತ್ತ ಮೇಷ್ಟ್ರು : ಮಾಜಿ ಶಾಸಕರ ಪಾಠಕ್ಕೆ ಮನಸೋತ್ರು ವಿದ್ಯಾರ್ಥಿಗಳು

0

ಬೆಂಗಳೂರು : ರಾಜಕಾರಣಿಗಳು ಸದಾ ರಾಜಕೀಯದ ಬಗ್ಗೆಯೇ ಯೋಚನೆಯಲ್ಲಿರುತ್ತಾರೆ. ಆದ್ರೆ ಇಲ್ಲೊಬ್ಬರು ಮಾಜಿ ಶಾಸಕರು ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡ್ತಿದ್ದಾರೆ. ನಿತ್ಯವೂ ಮಕ್ಕಳಿಗೆ ಕಠಿಣವಾಗಿರೊ ಗಣಿತ ಪಾಠವನ್ನು ಸುಲಭ ರೀತಿಯಲ್ಲಿ ಬಿಡಿಸಿ ಹೇಳೋ ಮೂಲಕ ವಿದ್ಯಾರ್ಥಿಗಳ ಮನಗೆದ್ದಿದ್ದಾರೆ. ಈ ಮೂಲಕ ಮಾಜಿ ಶಾಸಕರ ಕಾರ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು, ಅಷ್ಟಕ್ಕೂ ಗಣಿತ ಪಾಠ ಹೇಳಿಕೊಡ್ತಿರೋರು ಬೇರಾರೂ ಅಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎನ್.ವಿ.ದತ್ತ. ರಾಜಕಾರಣದಲ್ಲಿ ಸಕ್ರೀಯರಾಗಿದ್ದರೂ, ಶಾಸಕರಾಗಿ ಆಯ್ಕೆಯಾಗಿದ್ದರೂ ಕೂಡ ಜನರು ಮಾತ್ರ ಇವರನ್ನು ದತ್ತ ಮೇಸ್ಟ್ರು ಅಂತಾನೇ ಕರೆಯುತ್ತಾರೆ. ಸರಳತೆಯ ಪ್ರತೀಕದಂತಿರುವ ಹಿರಿಯ ರಾಜಕಾರಣಿ ವೈ.ಎಸ್.ವಿ.ದತ್ತ ಅವರು ಇದೀಗ ಕೊರೊನಾದಿಂದ ತತ್ತರಿಸಿ, ಮನೆಯಲ್ಲಿಯೇ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ದರಾಗುತ್ತಿರೋ ಮಕ್ಕಳಿಗೆ ಗಣಿತ ಪಾಠ ಬೋಧನೆ ಮಾಡುತ್ತಿದ್ದಾರೆ. ನಿತ್ಯವೂ ಸಂಜೆ 7.30 ರಿಂದ 8.30ರ ವರೆಗೆ ಫೇಸ್ ಬುಕ್ ಲೈವ್ ಮೂಲಕ ಗಣಿತ ಹೇಳಿಕೊಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರ ಬಿಎಸ್ ಇ ಪದವೀಧರರು. ರಾಜಕಾರಣಕ್ಕೆ ಎಂಟ್ರಿ ಕೊಡುವ ಮುನ್ನ ದತ್ತ ಅವರು ಗಣಿತ ಹಾಗೂ ಭೌತಶಾಸ್ತ್ರ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದಾ ಬಡವರ ಕಷ್ಟಗಳಿಗೆ ಧನಿಯಾಗುವ ಮೂಲಕ ಮಾಜಿ ಶಾಸಕ ದತ್ತ ಅವರು ಜನರ ಪಾಲಿಗೆ ದತ್ತಣ್ಣ ಎನಿಸಿಕೊಂಡಿದ್ದಾರೆ. ರೈತರ ಸಮಸ್ಯೆ, ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿರೋ ವೈಎಸ್ ವಿ ದತ್ತ ಅವರು ಜೆಡಿಎಸ್ ಪಕ್ಷದ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರಳತೆ ಮತ್ತು ಸಜ್ಜನಿಕೆಯ ರಾಜಕಾರಣಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ವೈಎಸ್ ವಿ ದತ್ತ ಅವರು ಇದೀಗ ಸರಳತೆಯ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡ್ತಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ಜೂನ್ ಎರಡನೇ ವಾರದಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಕೊರೊನಾ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ ಬೋಧನೆ ಮಾಡುವ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗಣಿತ ಪಾಠವನ್ನು ಆರಂಭಿಸಿರುವ ದತ್ತ ಅವರು, ಇನ್ನೊಂದು ವಾರಗಳ ಕಾಲ ಭೌತಶಾಸ್ತ್ರ ಪಾಠ ಮಾಡಲಿದ್ದಾರೆ.

ವೈಎಸ್ ವಿ ದತ್ತ ಅವರು ಶಾಸಕರಾಗಿದ್ದಾಗಲೂ ಶಿಕ್ಷಕರ ದಿನಾಚರಣೆಯ ದಿನದಂದು ಮಕ್ಕಳಿಗೆ ಪಾಠ ಬೋಧನೆ ಮಾಡಿದ್ದರು. ಇದೀಗ ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ. ಕೊರೊನಾ ಸಂಕಷ್ಟದ ದಿನಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಇತರ ರಾಜಕಾರಣಿಗಳಿಗೆ ದತ್ತಣ್ಣ ಮಾದರಿಯಾಗಿದ್ದಾರೆ.

ಮಾಜಿ ಶಾಸಕ ವೈಎಸ್ ವಿ ದತ್ತ ಅವರ ಗಣಿತ ಪಾಠ ನೀವೂ ಕೇಳಿ.

https://www.facebook.com/ysvDattaofficial/videos/575037706725891/
Leave A Reply

Your email address will not be published.