ರಾಜ್ಯದಲ್ಲಿ 110ಕ್ಕೂ ಅಧಿಕ ಶಿಕ್ಷಕರು ಕೊರೊನಾಗೆ ಬಲಿ : ವಿದ್ಯಾಗಮ, ಕೊರೊನಾದಿಂದ ಬೇಸತ್ತ ಅಧ್ಯಾಪಕರು

0

ಬೆಂಗಳೂರು : ಕೊರೊನಾ ಹೆಮ್ಮಾರಿಯ ಆರ್ಭಟಕ್ಕೆ ನಿಜಕ್ಕೂ ಶಿಕ್ಷಕ ಸಮುದಾಯ ತತ್ತರಿಸಿ ಹೋಗಿದೆ. ಈಗಾಗಲೇ ರಾಜ್ಯದಲ್ಲಿ 110 ಕ್ಕೂ ಅಧಿಕ ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಕೊರೊನಾ ಹೆಮ್ಮಾರಿ ಒಕ್ಕರಿಸಿದೆ. ಈ ನಡುವಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎಡವಟ್ಟು, ಬಲವಂತದ ಕೆಲಸದ ಹೇರಿಕೆಯಿಂದಾಗಿ ಶಿಕ್ಷಕರು ಇದೀಗ ಕೆಲಸಕ್ಕೆ ಗುಡ್ ಬೈ ಹೇಳುವ ಸ್ಥಿತಿಯಲ್ಲಿದ್ದಾರೆ.

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ಶಿಕ್ಷಕರನ್ನು ಕೊರೊನಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಹೆಲ್ತ್ ವಾಚ್, ಕ್ವಾರಂಟೈನ್ ಡ್ಯೂಟಿ, ಚೆಕ್ ಪೋಸ್ಟ್, ಮನೆ ಮನೆ ಸರ್ವೆ ಸೇರಿದಂತೆ ಹಲವು ರೀತಿಯಲ್ಲಿಯೂ ಬಳಸಿಕೊಳ್ಳಲಾಗಿದೆ. ಈ ನಡುವಲ್ಲೇ ವಿದ್ಯಾಗಮ ಯೋಜನೆಯ ಮೂಲಕ ಮನೆ ಮನೆಗೆ ತೆರಳುವಂತೆ ಸೂಚನೆಯನ್ನು ನೀಡಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆಯ ಜೊತೆಗೆ ಕೊರೊನಾ ವಿರುದ್ದದ ಹೋರಾಟದಲ್ಲಿಯೂ ಭಾಗಿಯಾಗಿದ್ದಾರೆ. ಆದ್ರೀಗ ಕೊರೊನಾ ವಿರುದ್ದದ ಹೋರಾಟದ ನಡುವಲ್ಲೇ ನೂರಾರು ಶಿಕ್ಷಕರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 110ಕ್ಕೂ ಅಧಿಕ ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 35 ಮಂದಿ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 18 ಮಂದಿ ಬೆಳಗಾವಿ ಹಾಗೂ 17 ಮಂದಿ ಶಿಕ್ಷಕರು ಚಿಕ್ಕೋಡಿಯವರು.

ಇನ್ನು ಬಾಗಲಕೋಟೆ 13, ಕೊಪ್ಪಳ 13, ರಾಯಚೂರು 9, ಕಲಬುರಗಿ 8, ಬಳ್ಳಾರಿ 5, ಬೆಂಗಳೂರು 4, ದಾವಣಗೆರೆ 3, ರಾಮನಗರ 2, ಚಿಕ್ಕಮಗಳೂರು 2, ಶಿವಮೊಗ್ಗ 2, ಮಂಡ್ಯ 2, ವಿಜಯಪುರ 2, ಮೈಸೂರು 2, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಓರ್ವ ಶಿಕ್ಷಕರು ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಶಿಕ್ಷಕರು ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಕೂಡ ಸಾಕಷ್ಟು ಮಂದಿ ಆರೋಗ್ಯವಂತ ಶಿಕ್ಷಕರೇ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇನ್ನು ಕೊರೊನಾ ಕಾಲದಲ್ಲಿ ಶಿಕ್ಷಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಮಾಡಿದ ಎಡವಟ್ಟು ಒಂದಲ್ಲ ಎರಡಲ್ಲ. ರಾಜ್ಯ ಸರಕಾರವೇ 55 ವರ್ಷ ಮೇಲ್ಪಟ್ಟವರನ್ನು ಕೊರೊನಾ ಡ್ಯೂಟಿಗೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದೆ.

ಕೊರೊನಾ ಸೋಂಕಿತರ ಪತ್ತೆಗೆ ಮನೆಗೆ ಮನೆಗೆ ತೆರಳಬೇಕಾಗುತ್ತೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆಯಿದೆ ಅನ್ನೋದು ಸರಕಾರದ ಲೆಕ್ಕಾಚಾರ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾಗಮದ ಹೆಸರಲ್ಲಿ ಶಿಕ್ಷಕರನ್ನು ಮನೆ ಮನೆಗೆ ಕಳುಹಿಸುವ ಕಾರ್ಯವನ್ನು ಮಾಡಿದ್ದಾರೆ. ವಿದ್ಯಾಗಮ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶಿಕ್ಷಕರನ್ನು ಕನಿಷ್ಠ ಕೊರೊನಾ ತಪಾಸಣೆಗೂ ಒಳಪಡಿಸಿಲ್ಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಕರನ್ನು ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಆದರೆ ಜಿಲ್ಲಾ ಶಿಕ್ಷಣ ಇಲಾಖೆ ಶಿಕ್ಷಕರನ್ನು ಕೊರೊನಾ ಡ್ಯೂಟಿಯ ಜೊತೆ ಜೊತೆಗೆ ವಿದ್ಯಾಗಮ ಕಾರ್ಯದಲ್ಲಿ ಯೂ ತೊಡಗಿಸಿಕೊಳ್ಳುವಂತೆ ಶಿಕ್ಷಕರಿಗೆ ಒತ್ತಡವನ್ನು ಹೇರುತ್ತಿದೆ. ನಿತ್ಯವೂ ಶಾಲೆಗೆ ಬಂದು ಹಾಜರಾತಿಯನ್ನು ಹಾಕಿದ ಬಳಿಕವೇ ಕೊರೊನಾ ಹಾಗೂ ವಿದ್ಯಾಗಮ ಡ್ಯೂಟಿಗೆ ತೆರಳಬೇಕಾಗಿದೆ.

ಆದರೆ ಹತ್ತಾರು ಕಿ.ಮೀ. ದೂರದಲ್ಲಿರುವ ಶಾಲೆಗೆ ಹೋಗಿ ಹಾಜರಿ ಹಾಕಿ, ಮತ್ತೆ ತಮ್ಮ ವಾರ್ಡಿಗೆ ತೆರಳಿ ಕೊರೊನಾ ಡ್ಯೂಟಿ, ವಿದ್ಯಾ ಗಮ ಯೋಜನೆಯಡಿ ಮಕ್ಕಳನ್ನು ಭೇಟಿ ಮಾಡೋದು ದುಸ್ಥರವಾಗುತ್ತಿದೆ. ಜಿಲ್ಲಾಡಳಿತ ಕೊರೊನಾ ಡ್ಯೂಟಿ ಮಾಡಿ ಅಂತಿದ್ರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾಗಮ ಯೋಜನೆಯ ಕುರಿತು ಒತ್ತಡವನ್ನು ಹೇರುತ್ತಿದ್ದಾರೆ. ಹೀಗಾಗಿ ಶಿಕ್ಷಕರ ಕೆಲಸವೇ ಸಾಕಪ್ಪಾ ಸಾಕು ಅನ್ನುತ್ತಿದ್ದಾರೆ.

ಇನ್ನೂ ಹಲವರು ವಿದ್ಯಾಗಮ ಯೋಜನೆಯಲ್ಲಿ ಮನೆ ಮನೆಗೆ ಅಲೆಯುವ ಬದಲು ಮಕ್ಕಳನ್ನು ಶಾಲೆಯಲ್ಲಿಯೇ ಕೂರಿಸಿ ಪಾಠ ಬೋಧನೆ ಮಾಡುವುದೇ ಒಳ್ಳೆಯದು ಅಂತಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಶಿಕ್ಷಕರ ಸುರಕ್ಷತೆ ಬಗ್ಗೆಯೂ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಆದರೆ ವೇತನ ಕೊಡುವ ಒಂದೇ ಒಂದು ಕಾರಣಕ್ಕೆ ಶಿಕ್ಷಕರನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಕನಿಷ್ಠ ಶಿಕ್ಷಕರನ್ನು ಇತರ ಕಾರ್ಯಕ್ಕೆ ನಿಯೋಜನೆ ಮಾಡುವ ಬದಲು ಮಕ್ಕಳ ಶಿಕ್ಷಣದ ಬಗ್ಗೆಯೇ ಬಳಸಿಕೊಳ್ಳು ವುದು ಸೂಕ್ತ.

ಕೊರೊನಾ ಕಾರ್ಯಕ್ಕೆ ನಿಯೋಜನೆ ಮಾಡಿರುವ ಶಿಕ್ಷಕರನ್ನು ವಿದ್ಯಾಗಮ ಯೋಜನೆಯ ಒತ್ತಡವನ್ನೂ ಹೇರಿಕೆ ಮಾಡುವುದು ಸರಿಯಲ್ಲ. ಅಧಿಕಾರಿಗಳ ಬಳಿ ಕೇಳಿದ್ರೆ ನಾವೂ ಕೂಡ ಎರಡೆರಡು ಡ್ಯೂಟಿ ಮಾಡ್ತೇವೆ ಅಂತಾ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡ್ತಾರೆ. ನಾವು ಮನೆ ಮನೆಗೆ ತೆರಳಬೇಕಾಗಿದೆ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.