ಕಂಪೆನಿಗೆ ವರ್ಕ್ ಫ್ರಂ ಹೋಮ್, ಮಕ್ಕಳಿಗೆ ಮಾತ್ರ ಶಾಲೆ ! ಲಾಬಿಗೆ ಮಣಿಯಿತಾ ಸರಕಾರ, ಶುರುವಾಯ್ತು ಪೋಷಕರ ಆಕ್ರೋಶ

0

ಬೆಂಗಳೂರು : ಕೊರೊನಾ ಅಬ್ಬರ ಹೆಚ್ಚುತ್ತಿದೆ, ಇನ್ನೊಂದೆಡೆ ಲಾಕ್ ಡೌನ್ ತೆರವು ಮಾಡಲಾಗುತ್ತಿದೆ. ಈ ನಡುವಲ್ಲೇ ಕಂಪೆನಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ನಡೆಸುವಂತೆ ಸರಕಾರ ಸೂಚನೆ ನೀಡಿದೆ. ಆದರೆ ತರಾತುರಿಯಲ್ಲಿ ಜೂನ್ 5 ರಿಂದ ಶಾಲೆಗಳನ್ನು ಪುನರಾರಂಭಕ್ಕೆ ಸರಕಾರ ಮುಂದಾಗಿದ್ದು, ಕೊರೊನಾ ಭೀತಿಯ ನಡುವಲ್ಲೇ ಪುಟಾಣಿ ಮಕ್ಕಳನ್ನು ಶಾಲೆಗೆ ಕರೆತಲು ರಾಜ್ಯ ಸರಕಾರ ಸಜ್ಜಾಗಿದೆ. ಆದ್ರೆ ಸರಕಾರ ಹಾಗೂ ಶಿಕ್ಷಣ ಇಲಾಖೆಯ ಕ್ರಮಕ್ಕೆ ಪೋಷಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕಳೆದೊಂದು ವಾರದಿಂದಲೂ ಕೊರೊನಾ ಮಹಾಮಾರಿ ರಾಜ್ಯದಲ್ಲಿ ಆರ್ಭಟಿಸುತ್ತಿದೆ. ಕಳೆದ 10 ದಿನಗಳಲ್ಲಿ ಕೊರೊನಾ ಸೋಂಕು ದುಪ್ಪಟ್ಟಾಗಿದ್ದು, ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿದಾಟಿದೆ. ಕೇಂದ್ರ ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಜಾರಿ ಮಾಡಿದ್ದ ಲಾಕ್ ಡೌನ್ ಹಂತ ಹಂತವಾಗಿ ತೆರವು ಮಾಡಲು ಮುಂದಾಗಿದೆ. ಆದ್ರೆ ರಾಜ್ಯ ಸರಕಾರ ಮಾತ್ರ ತರಾತುರಿಯಲ್ಲಿ ಶಾಲೆಗಳನ್ನು ತೆರೆಯೋದಕ್ಕೆ ಸಜ್ಜಾಗಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಶಾಲೆಗಳನ್ನು ಆರಂಭಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಜೂನ್ 8 ರಿಂದ ದಾಖಲಾತಿಗಳನ್ನು ಪ್ರಾರಂಭಿಸುವಂತೆಯೂ ಸೂಚಿಸಿದೆ. ಜುಲೈ 1ರಿಂದ 4 ರಿಂದ 7ನೇ ತರಗತಿ, ಜುಲೈ 15ರಿಂದ 1 ರಿಂದ 3ನೇ ತರಗತಿ ಹಾಗೂ 8 ರಿಂದ 10ನೇ ತರಗತಿ ಮತ್ತು ಜುಲೈ 20ರಿಂದ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಕುರಿತು ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಶಾಲೆಗಳಿಗೆ ಆದೇಶ ಹೊರಡಿಸಿದೆ.

ಪೋಷಕರ ಅಭಿಪ್ರಾಯ ಪರಿಗಣಿಸುತ್ತಾ ಸರಕಾರ ?
ರಾಜ್ಯ ಸರಕಾರ ಆರಂಭಿಸಲು ಹೊರಟಿರುವ ದಿನಾಂಕಗಳಂದೇ ಶಾಲೆಗಳನ್ನು ಪುನರಾರಂಭಿಸುವ ಕುರಿತು ಜೂನ್ 10 ರಿಂದ 12ರ ಒಳಗಾಗಿ ಮಕ್ಕಳ ಪೋಷಕರ ಸಭೆಯನ್ನು ಕರೆಯುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ಸರಕಾರ ನಿಗದಿ ಪಡಿಸಿದ ದಿನಾಂಕಗಳಂದೇ ಶಾಲೆಯನ್ನು ಪುನರಾರಂಭಿಸುವ ಕುರಿತು ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ಕೊರೊನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತರಗತಿ ಹಾಗೂ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ನಡೆಸುವುದು. ಅಥವಾ ಶಾಲೆಯನ್ನು ಬೆಳಗ್ಗೆ 8 ರಿಂದ 12 ಹಾಗೂ ಮಧ್ಯಾಹ್ನ 1 ರಿಂದ 5 ಗಂಟೆಗಳ ಅವಧಿಯ ಎರಡು ಪಾಳಿಗಳಲ್ಲಿ ನಡೆಸುವುದು. ಅಥವಾ 1 ರಿಂದ 5ನೇ ತರಗತಿ ಹಾಗೂ 6 ರಿಂದ 10ನೇ ತರಗತಿಯ ವರೆಗೆ ಹೀಗೆ ಎರಡು ವಿಭಾಗಗಳಲ್ಲಿ ಒಂದೊಂದು ದಿನ ಬಿಟ್ಟು ಶಾಲೆಗಳನ್ನು ನಡೆಸುವುದು. ಹೀಗೆ ಮೂರು ಮಾದರಿಯಲ್ಲಿ ಶಾಲೆಗಳನ್ನು ನಡೆಸಲು ಪೋಷಕರಿಗೆ ಆಯ್ಕೆಗಳನ್ನು ನೀಡಿದೆ. ಸರಕಾರ ಸೂಚಿಸಿದ ದಿನಗಳಂದು ಶಾಲೆಗಳನ್ನು ಪುನರಾರಂಭಿಸಲು ಪೋಷಕರು ಒಪ್ಪಿಗೆ ಸೂಚಿಸದೇ ಇದ್ದಲ್ಲಿ, ಸಭೆಯಲ್ಲಿಯೇ ಒಂದು ದಿನಾಂಕವನ್ನು ನಿಗದಿ ಪಡಿಸಬಹುದಾಗಿದೆ. ಅಲ್ಲದೇ ಶಾಲೆಗಳನ್ನು ನಡೆಸಲು ಪೋಷಕರ ಸಲಹೆಗಳನ್ನು ಪಡೆಯಲು ಸೂಚಿಸಿದೆ. ಆದರೆ ಶಾಲಾ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ ನಂತರದಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲು ಮುಂದಾಗಿದೆ. ಆದರೆ ಸರಕಾರ ಪೋಷಕರ ಅಭಿಪ್ರಾಯಗಳನ್ನು ಕೇವಲ ಕಾಟಾಚಾರಕ್ಕೆ ಕೇಳುವ ಯತ್ನ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ತರಾತುರಿಯ ಹಿಂದಿದೆ ಖಾಸಗಿ ಲಾಬಿ ?
ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂಬ ಚಿಂತನೆ ನಡೆಯುತ್ತಿದೆ. ಮಹಾರಾಷ್ಟ್ರ ಸರಕಾರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನೇ ರದ್ದುಗೊಳಿಸಿದೆ. ಆದ್ರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತರಾತುರಿಯಲ್ಲಿ ಶಾಲೆಗಳನ್ನು ಪುನರಾರಂಭಿಸಲು ಹೊರಟಿದ್ದಾರೆ. ಜೂನ್ 5 ರಂದು ಶಾಲೆಗಳು ಆರಂಭವಾಗಲಿದ್ದು, ಜೂನ್ 8ರಿಂದ ದಾಖಲಾತಿ ನಡೆಸಲು ಅವಕಾಶ ಕಲ್ಪಿಸಿದೆ. ಆದರೆ ಪೋಷಕರ ಅಭಿಪ್ರಾಯ ಸಂಗ್ರಹವನ್ನು ಜೂನ್ 10 ರಿಂದ 12ರ ವರೆಗೆ ನಡೆಸಲು ಸೂಚಿಸಿದ್ದಾರೆ.

ಮೊದಲೇ ಪೋಷಕರು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಕ ಸಮಸ್ಯೆ ಪೋಷಕರನ್ನು ಕಾಡುತ್ತಿದೆ. ಇನ್ನೊಂದೆಡೆ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುವುದು ಅನ್ನೋ ಆತಂಕವೂ ಇದೆ. ರಾಜ್ಯ ಸರಕಾರಕ್ಕೆ ಮಕ್ಕಳು, ಪೋಷಕರ ಬಗ್ಗೆ ಕಾಳಜಿ ಇದ್ದಿದ್ದರೆ, ಮೊದಲು ಪೋಷಕರ ಸಭೆಯ ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಶಾಲೆಗಳ ದಾಖಲಾತಿಯನ್ನು ಆರಂಭಿಸುತ್ತಿತ್ತು. ಆದ್ರೀಗ ತರಾತುರಿಯಲ್ಲಿ ಅಡ್ಮಿಷನ್ ಮಾಡೋದಕ್ಕೆ ಆದೇಶ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾತ್ರವಲ್ಲ ಸರಕಾರ ಖಾಸಗಿ ಲಾಭಿ ಮಣಿದಿದೆಯಾ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ಆರೋಪಿಸುತ್ತಿದ್ದಾರೆ.

ಕಾಲೇಜು ಬೇಡ, ಶಾಲೆ ಬೇಕು !
ರಾಜ್ಯದಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ತರಗತಿ ಆರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆ, ಸಚಿವರು ಹಾಗೂ ರಾಜ್ಯ ಸರಕಾರದ ಪ್ರಸ್ತಾಪವಿಲ್ಲ. ಇನ್ನು ಪದವಿ ತರಗತಿಗಳ ಆರಂಭ ಯಾವಾಗ ನಿರ್ಧಾರವಾಗಿಲ್ಲ. ಪದವಿ, ಪಿಯುಸಿ ತರಗತಿಗಳನ್ನು ಆರಂಭಿಸಿ ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸುವುದು ಹೆಚ್ಚು ಸೂಕ್ತ. ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿಗಳನ್ನು ಅನುಸರಿಸಲು ಸುಲಭವಾಗಬಹುದು. ಅದನ್ನು ಬಿಟ್ಟು ಏನನ್ನೂ ಅರಿಯದ ಮಕ್ಕಳನ್ನು ಪ್ರಯೋಗಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಅನ್ನೋದು ಪೋಷಕರ ಪ್ರಶ್ನೆ.

ಭಯದಲ್ಲಿಯೇ ಹೊರಟ ಶಿಕ್ಷಕರು
ಕೊರೊನಾ ಸೋಂಕು ವ್ಯಾಪಿಸುತ್ತಿರೋ ನಡುವಲ್ಲೇ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸಲು ಹೊರಟಿರುವ ಶಿಕ್ಷಣ ಇಲಾಖೆ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವರು ಹೊರ ರಾಜ್ಯ, ಜಿಲ್ಲೆಗಳಲ್ಲಿ ಬಂಧಿಯಾಗಿದ್ದಾರೆ. ತಡವಾಗಿಯೇ ಶಾಲೆ ಶುರುವಾಗುತ್ತೆ ಅಂತಾ ಕುಳಿತಿದ್ದ ಶಿಕ್ಷಕರಿಗೆ ಇಲಾಖೆ ಸಡನ್ ಶಾಕ್ ಕೊಟ್ಟಿದೆ. ಕನಿಷ್ಟ ಒಂದು ವಾರವೂ ಸಮಯ ನೀಡದೇ ಶಾಲೆಗಳನ್ನು ಪುನರಾರಂಭಿಸೋದಕ್ಕೆ ಹೊರಟಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡ ದಿನದಿಂದಲೂ ಕೂಡ ಶಿಕ್ಷಣ ಸಚಿವರ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರನ್ನು ಗೊಂದಲಕ್ಕೆ ಸಿಲುಕಿಸುತ್ತಲೇ ಬಂದಿದೆ. ಎಸ್ಎಸ್ಎಲ್ ಸಿ ಪರೀಕ್ಷೆ ವಿಚಾರದಲ್ಲಿಯೂ ಸಾಕಷ್ಟು ಗೊಂದಲ ಮೂಡಿಸಲಾಗಿತ್ತು. ದಿನಕ್ಕೊಂದು ನಿರ್ಣಯದಿಂದಾಗಿ ವಿದ್ಯಾರ್ಥಿಗಳು ಕಂಗೆಟ್ಟು ಹೋಗಿದ್ದಾರೆ. ಇದೀಗ ಶಾಲೆಯಗಳನ್ನು ಆರಂಭಿಸುವ ವಿಚಾರದಲ್ಲಿಯೂ ಮತ್ತೆ ಅದೇ ಗೊಂದಲ ಮುಂದುವರಿದಿದೆ. ಮದ್ಯದ ಅಂಗಡಿಗಳನ್ನು ಆರಂಭಿಸುವಾಗಲೂ ಹತ್ತಾರು ಬಾರಿ ಯೋಚಿಸಿದ್ದ ಸರಕಾರ ಶಾಲೆಯ ವಿಚಾರದಲ್ಲಿ ಯಾಕಿಷ್ಟು ನಿರ್ಲಕ್ಷ್ಯವಹಿಸುತ್ತಿದೆ ಅನ್ನೋದು ಅರ್ಥವಾಗುತ್ತಿಲ್ಲ. ಒಂದು ಕಡೆ ಶಾಲೆಗಳನ್ನು ಪುನರಾರಂಭಿಸೋದಕ್ಕೆ ದಿನಾಂಕ ನಿಗದಿ ಮಾಡಿ, ದಾಖಲಾತಿ ಆರಂಭಿಸಿ, ನಂತರ ಪೋಷಕರ ಅಭಿಪ್ರಾಯ ಸಂಗ್ರಹಿಸೋದು ಎಷ್ಟು ಸರಿ. ಹಿರಿಯ ರಾಜಕಾರಣಿ ಸುರೇಶ್ ಕುಮಾರ್ ಅವರಂತಹ ಸಚಿವರಿದ್ದೂ ಶಿಕ್ಷಣ ಇಲಾಖೆಯಲ್ಲಿ ಯಾಕಿಷ್ಟು ಗೊಂದಲ ಅನ್ನೋದು ಸಾರ್ವಜನಿಕರ ಪ್ರಶ್ನೆ.

Leave A Reply

Your email address will not be published.