ಕೊರೊನಾ ಸೋಂಕಿತರಲ್ಲಿ ಉಡುಪಿಗೆ ಅಗ್ರಸ್ಥಾನ : ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸೋಂಕಿತರಿದ್ದಾರೆ ಗೊತ್ತಾ ?

0

ಬೆಂಗಳೂರು : ಕೊರೊನಾ ಮಹಾಮಾರಿ ದಿನಕಳೆದಂತೆ ತನ್ನ ಆರ್ಭಟ ಮುಂದುವರಿಸುತ್ತಿದೆ. ಕೊರೊನಾ ಸುನಾಮಿಗೆ ಕಡಲನಗರಿ ಉಡುಪಿ ತತ್ತರಿಸಿ ಹೋಗಿದೆ. ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರನ್ನೂ ಮೀರಿಸಿ ಅಗ್ರಸ್ಥಾನಕ್ಕೇರಿದೆ.

ಕರಾವಳಿ ಜಿಲ್ಲೆಯಲ್ಲಿ ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಅದ್ರಲ್ಲೂ ಕೊರೊನಾ ಮುಕ್ತವಾಗಿ ಗ್ರೀನ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇದೀಗ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ಕೊರೊನಾ ಸೋಂಕು ರಣಕೇಕೆ ಹಾಕಿದೆ. ಒಂದೇ ದಿನ ಬರೋಬ್ಬರಿ 150 ಮಂದಿಗೆ ಸೋಂಕು ಕಾಣಿಸಿಕೊಂಡು ಹೊಸ ದಾಖಲೆ ಬರೆದಿದೆ. ಅಲ್ಲದೇ ಐದನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಒಟ್ಟು 410 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಿಲಿಕಾನ್ ಸಿಟಿಯನ್ನೂ ಮೀರಿಸಿ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇದುವರೆಗೂ 63 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ಮುಂಬೈನಿಂದ ವಾಪಾಸಾಗಿದ್ದ ಓರ್ವ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ ಕೊರೊನಾ ಸೋಂಕಿಗೆ ತುತ್ತಾಗಿರುವ 346 ಮಂದಿ ಅಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇನ್ನು ಕಲಬುರಗಿಯೂ ಕೊರೊನಾ ಭರ್ಜರಿ ಶಾಕ್ ಕೊಟ್ಟಿದೆ. ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 100 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 405ಕ್ಕೆ ಏರಿಕೆಯಾಗಿದ್ದು ಸೋಂಕಿತರರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 128 ಮಂದಿ ಸೋಂಕಿತರರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ ಜಿಲ್ಲೆಯಲ್ಲಿ ಒಟ್ಟು 7 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಆರಂಭದಿಂದಲೂ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದ ಸಿಲಿಕಾನ್ ಸಿಟಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ, ಉಡುಪಿ, ಕಲಬುರಗಿ ಜಿಲ್ಲೆಗಳಿಂದಾಗಿ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಸಿಲಿಕಾನ್ ಸಿಟಿ ಮಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಲ್ಲಿ ಒಟ್ಟು 397 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, 237 ಮಂದಿ ಈಹಾಹಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ 148 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ 11 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ.

ಯಾದಗಿರಿ ಜಿಲ್ಲೆಯಲ್ಲಿಯೂ ಕೊರೊನಾ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ 290 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ 27 ಮಂದಿ ಗುಣಮುಖರಾಗಿದ್ದು, 262 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿರುವ ಮಂಡ್ಯದಲ್ಲಿ ಕೊರೊನಾ ಹಾವಳಿ ಕೊಂಚ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕೇವಲ 4 ಪ್ರಕರಣ ದಾಖಲಾಗಿದ್ದು, 289 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 208 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, 81 ಮಂದಿ ಮಹಾಮಾರಿಯನ್ನು ಜಯಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ದ್ವಿಶತಕ ದಾಟಿದೆ. ಕಳೆದೊಂದು ವಾರದ ಅವಧಿಯಲ್ಲಿ ಸೋಂಕಿತರ ಪ್ರಮಾಣ ದಿಢೀರ್ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 233 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, 195 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 37 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಬೆಳಗಾವಿಯಲ್ಲಿಯೂ ಕೊರೊನಾ ಶಾಕ್ ಕೊಟ್ಟಿದ್ದು ಒಂದೇ ದಿನ 50 ಮಂದಿಗೆ ಸೋಂಕು ಉಲ್ಬಣಿಸಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 211 ಕ್ಕೆ ಏರಿಕೆಯಾಗಿದ್ದು, 93 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ರೆ, 117 ಮಂದಿಗೆ ಗುಣಮುಖರಾಗಿದ್ದಾರೆ.

ಉಳಿದಂತೆ ಹಾಸನ 182, ಬೀದರ್ 175, ದಾವಣಗೆರೆ 163, ಚಿಕ್ಕಬಳ್ಳಾಪುರ 143, ದಕ್ಷಿಣ ಕನ್ನಡ 129, ವಿಜಯಪುರ 127, ಮೈಸೂರು 94, ಬಾಗಲಕೋಟೆ 88, ಉತ್ತರ ಕನ್ನಡ 82, ಬಳ್ಳಾರಿ 51, ಶಿವಮೊಗ್ಗ 51, ಧಾರವಾಡ 49, ಚಿತ್ರದುರ್ಗ 39, ಗದಗ 35, ಕೋಲಾರ 25, ಚಿಕ್ಕಮಗಳೂರು 18, ಬೆಂಗಳೂರು ಗ್ರಾಮಾಂತರ 18, ಹಾವೇರಿ 16, ಕೊಪ್ಪಳ 4, ಕೊಡಗು 3, ರಾಮನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಒಂದೇ ದಿನ 388 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, 3796 ಮಂದಿಗೆ ಕೊರೊನಾ ಮಹಾಮಾರಿ ಖಚಿತವಾಗಿತ್ತು. ರಾಜ್ಯದಲ್ಲಿ 52 ಮಂದಿಯನ್ನು ಕೊರೊನಾ ಬಲಿ ಪಡೆದಿದ್ರೆ, ಈಗಾಗಲೇ 1403 ಮಂದಿ ಕೊರೊನಾ ಮಹಾಮಾರಿಯ ವಿರುದ್ದ ಗೆಲುವು ಸಾಧಿಸಿದ್ದಾರೆ. ಉಳಿದಂತೆ 2339 ಮಂದಿ ಕೊರೊನಾ ಮಹಾಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಒಟ್ಟು 1,46,430 ಮಂದಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 32,239 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ ಪ್ರಥಮ ಸಂಪರ್ಕ ಹೊಂದಿದ 17,503 ಮಂದಿ ಹಾಗೂ ದ್ವಿತೀಯ ಸಂಪರ್ಕ ಹೊಂದಿದ 14,736 ಮಂದಿಯ ಮೇಲೆ ನಿಗಾ ಇರಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 3,19,628 ಮಂದಿಯ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಲಾಗಿದ್ದು, 3,10,967 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ ಸುಮಾರು 8,000ಕ್ಕೂ ಅಧಿಕ ಮಂದಿಯ ವರದಿ ಬರಬೇಕಿದ್ದು, ಹಲವರನ್ನು ಇನ್ನಷ್ಟೇ ತಪಾಸಣೆಗೆ ಒಳಪಡಿಸಬೇಕಿದೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಚಾಮರಾಜನಗರ ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿಯೂ ತನ್ನ ಕದಂಬಬಾಹುಗಳನ್ನು ಚಾಚಿದ್ದು, ದಿನೇ ದಿನೇ ಆತಂಕವನ್ನು ಹೆಚ್ಚಿಸುತ್ತಿದೆ.

Leave A Reply

Your email address will not be published.