ದ್ವೀಪದಿಂದ ಮಕ್ಕಳನ್ನು ದೋಣಿಯಲ್ಲಿ SSLC ಪರೀಕ್ಷಾ ಕೇಂದ್ರಕ್ಕೆ ಕರೆತಂದ ಡಿಡಿಪಿಐ : ಎನ್.ಎಚ್.ನಾಗೂರ ಕಾರ್ಯಕ್ಕೆ ಭಾರಿ ಮೆಚ್ಚುಗೆ

ಬೈಂದೂರು : ಭಾರೀ ಮಳೆಯ ನಡುವಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಮಳೆಯಿಂದಾಗಿ ಕುದ್ರುವಿನಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋದು ಅಸಾಧ್ಯವಾಗಿತ್ತು. ಆದ್ರೆ ಮಕ್ಕಳ ಮೇಲಿನ ಕಾಳಜಿಯಿಂದ ಡಿಡಿಪಿಐ ದೋಣಿಯ ಮೂಲಕ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಿದ್ದಾರೆ. ಅಧಿಕಾರಿಯ ಕಾರ್ಯಕ್ಕೀಗ ಜನಮೆಚ್ಚುಗೆ ವ್ಯಕ್ತವಾಗಿದೆ.

ಹೀಗೆ ಜನರಿಂದ ಮೆಚ್ಚುಗೆಗೆ ಪಡೆದುಕೊಳ್ಳುತ್ತಿರೋರು ಬೇರಾರೂ ಅಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಡುಪಿ ಡಿಡಿಪಿಐ ಎನ್.ಎಚ್.ನಾಗೂರ. ಹೌದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕರುವಿನ ಹಿತ್ಲು ದ್ವೀಪದಲ್ಲಿ ಶಿಲ್ಪಾ ಹಾಗೂ ಸಂಜನಾ ಅನ್ನೋ ವಿದ್ಯಾರ್ಥಗಳು ವಾಸವಾಗಿದ್ದರು. ಮರವಂತೆ ಶಾಲೆಯ ವಿದ್ಯಾರ್ಥಿಗಳು ತುಂಬಿ ಹರಿಯುತ್ತಿದ್ದ ಸೌಪರ್ಣಿಕಾ ನದಿಯನ್ನು ದಾಟಿ ನಾವುಂದ ಪರೀಕ್ಷಾ ಕೇಂದ್ರಕ್ಕೆ ಬರಬೇಕಾಗಿತ್ತು. ಆದ್ರೆ ಭಾರೀ ಮಳೆಯಿಂದಾಗಿ ಮಕ್ಕಳು ಪರೀಕ್ಷೆ ಬರೆಯೋದು ಅಸಾಧ್ಯವಾಗಿತ್ತು.

ಈ ವಿಷಯ ತಿಳಿಯುತ್ತಲೇ ಎಚ್ಚೆತ್ತುಕೊಂಡ ಡಿಡಿಪಿಐ ಎನ್.ಎಚ್.ನಾಗೂರ ಅವರು ಬೈಂದೂರು ತಹಶೀಲ್ದಾರ್‌ ಶೋಭಾ ಲಕ್ಷ್ಮೀ ಅವರಿಗೆ ಕರೆ ಮಾಡಿ ದೋಣಿ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ನಂತರ ಡಿಡಿಪಿಐ ಅವರೇ ಖುದ್ದು ಸ್ಥಳಕ್ಕೆ ಬಂದು ದೋಣಿಯ ಮೂಲಕ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಿ ಮಕ್ಕಳು ವಾಸವಿದ್ದ ಕುರುಹಿತ್ಲು ಪ್ರದೇಶಕ್ಕೆ ಬಂದಿದ್ದಾರೆ. ನಡೆದುಕೊಂಡೇ ಮಕ್ಕಳ ಮನೆಗೆ ತೆರಳಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಮತ್ತದೇ ದೋಣಿಯ ಮೂಲಕ ವಿದ್ಯಾರ್ಥಿಗಳನ್ನು ನದಿ ದಾಟಿಸಿದ್ದಾರೆ.

https://www.youtube.com/watch?v=cTwYL4fPysU

ವಾಹನದ ಮೂಲಕ ವಿದ್ಯಾರ್ಥಿನಿಯರಿಬ್ಬರನ್ನೂ ನಾವುಂದ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆಯನ್ನು ಬರೆಯಿಸಿದ್ದಾರೆ. ಡಿಡಿಪಿಐ ಅವರ ಕಾರ್ಯಕ್ಕೆ ಇದೀಗ ಭಾರೀ ಜನ ಮೆಚ್ಚುಗೆ ವ್ಯಕ್ತವಾಗಿದೆ. ಮಾತ್ರವಲ್ಲ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದ ಖ್ಯಾತಿಯೂ ಉಡುಪಿ ಜಿಲ್ಲೆ ಪಡೆದುಕೊಂಡಿದೆ. ಜಿಲ್ಲೆಯ ಶೇ.99.5ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಕೊರೊನಾ ಸಂಕಷ್ಟ, ಇನ್ನೊಂದೆಡೆ ಮಳೆಯ ನಡುವಲ್ಲೇ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗಬಾರದು. ಎಸ್‌ಎಸ್‌ಎಲ್‌ಸಿ ಮಕ್ಕಳ ಬದುಕಿನಲ್ಲಿ ಮಹತ್ವದ ಘಟ್ಟವಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ಶ್ರಮವಹಿಸಿದ್ದೇವೆ. ಎಲ್ಲಾ ಶಿಕ್ಷಕರು, ಅಧಿಕಾರಿಗಳು ಸಂಪೂರ್ಣ ಸಹಕಾರವನ್ನು ಕೊಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಬ್ಬರೂ ಪರೀಕ್ಷೆಯಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ನಾನು ಖುದ್ದು ತೆರಳಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದೇನೆ. ಎಲ್ಲರ ಸಹಕಾರ ದೊರೆತೆರೆ ಉಡುಪಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮಾದರಿ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಡಿಡಿಪಿಐ ಎನ್.ಎಚ್.‌ ನಾಗೂರ ಅವರು ನ್ಯೂಸ್‌ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

ಇನ್ನು ನಾಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕರುವಿನ ಹಿತ್ಲು ಗ್ರಾಮಕ್ಕೆ ಖುದ್ದು ಭೇಟಿ ಕೊಟ್ಟಿದ್ದ ಬೈಂದೂರು ತಹಶೀಲ್ದಾರ್‌ ಶೋಭಾಲಕ್ಷ್ಮೀ ಅವರು ಜನರ ಸಮಸ್ಯೆಯನ್ನು ಅರಿತಿದ್ದಾರೆ. ಅಲ್ಲದೇ ಜನರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ತೀರ್ಮಾನಿಸಲಿದೆ ಎಂದಿದ್ದಾರೆ.

https://www.youtube.com/watch?v=85wFldZwqlo

Comments are closed.