GOOD NEWS : ರಾಜ್ಯ ಸರ್ಕಾರಿ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆ ಬಿಡುಗಡೆ : ಸಿಎಂ ಆದೇಶ

ಬೆಂಗಳೂರು : ಕೇಂದ್ರ ಸರಕಾರಿ ನೌಕರರಿಗೆತುಟ್ಟಿ ಭತ್ಯೆ ಹಾಗೂ ಎಚ್‌ಆರ್‌ಎ ಹೆಚ್ಚಳ ಮಾಡಿದ ಬೆನ್ನಲ್ಲೇ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆ ನೀಡಲು ಸರಕಾರ ಒಪ್ಪಿಗೆ ನೀಡಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ, ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ತೆ ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ. ಕೇಂದ್ರ ಸರಕಾರ ಜುಲೈ 01, 2021ರಿಂದ ಪೂರ್ವಾನ್ವಯವಾಗಿ ತನ್ನ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ, ಆದೇಶ ಹೊರಡಿಸಿದೆ.

ಅಂತೆಯೇ ರಾಜ್ಯ ಸರಕಾರ ಕೂಡ ಪ್ರಸ್ತುತ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ, ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದೆ ತುಟ್ಟಿಭತ್ಯೆಯಲ್ಲಿ ಬಾಕಿ ಉಳಿದಿರುವ ಭಿನ್ನಾಂಶ ವನ್ನು ಸೇರ್ಪಡೆ ಮಾಡಿ, ಜುಲೈ 01, 2021ರ ಪೂರ್ವಾನ್ವಯವಾಗಿ ಶೇ.11ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆಗೊಳಿಸಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

ಸರಕಾರಿ ನೌಕರರ ಸಂಘದ ಮನವಿಯನ್ನು ಪುರಸ್ಕರಿಸಿರುವ ರಾಜ್ಯದ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಯವರಿಗೆ ಬಾಕಿ ಇರುವ ತುಟ್ಟಿ ಭತ್ಯೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

Comments are closed.