ಈ ಬಾರಿ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ : ರಾಜ್ಯ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ
ಬೆಂಗಳೂರು : ರಾಜ್ಯದಲ್ಲಿ ಕೋರಿಕೆಯ ವರ್ಗಾವಣೆಗೆ ಕಾಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದ ಹೊಸ ಆದೇಶದಿಂದಾಗಿ ನಿರಾಶೆಯುಂಟಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೂ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇದರಿಂದ ಕೌನ್ಸೆಲಿಂಗ್ ಮೂಲಕ ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಂಡ ಶಿಕ್ಷಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗಿದೆ.
ಆದರೆ ಪರಸ್ಪರ ವರ್ಗಾವಣೆ ಸಲ್ಲಿಸಿರುವ ಶಿಕ್ಷಕರಿಗೆ ಯಾವುದೇ ತೊಂದರೆ ಇಲ್ಲ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಸಿವಿಲ್ ಅಧಿನಿಯಮ-2020 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಅಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪರಸ್ಪರ ವರ್ಗಾವಣೆಗೊಂಡ ಶಿಕ್ಷಕರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಮತ್ತು ವರ್ಗಾವಣೆಯಾಗಿ ಬಂದ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆ ಮೇಲ್ವಿಚಾರಕರಿಗೆ ಸಿಹಿಸುದ್ದಿ : ರಾಜ್ಯ ಸರಕಾರದಿಂದ ಹೊಸ ಆದೇಶ
ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಹೊರತುಪಡಿಸಿ ಈ ವರ್ಷ ಇನ್ಯಾರಿಗೂ ವರ್ಗಾವಣೆ ಭಾಗ್ಯ ಇರುವುದಿಲ್ಲ. ಪರೀಕ್ಷೆಯಲ್ಲಿ ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಲ್ಲಿ ಯಾವುದೇ ಅಡೆತಡೆಗಳು ಉಂಟಾಗಬಾರದು ಎಂಬ ಕಾರಣದಿಂದಾಗಿ ಪ್ರಸಕ್ತ ಸಾಲಿನ ಅಂತ್ಯದವರೆಗೂ ಶಿಕ್ಷಕರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಅಧಿಕೃತ ಮಾಹಿತಿ ರವಾನಿಸಲಾಗಿದೆ.



